ಮತ್ತದೇ ಡಿಸೆಂಬರ್ ಅಂತ್ಯ….ಹೌದು 2021ರ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಹೊಸವರ್ಷ ಆಚರಣೆ ಈ ಬಾರಿ ಇಲ್ಲ.ಆದರೆ ನಮ್ಮ ದಿನನಿತ್ಯದ ದಿನಗಳ ಗಣನೆ, ದಿನಚರಿಯ ನಡುವೆ ಹೊಸ ವರ್ಷದ ಕ್ಯಾಲೆಂಡರ್ ಸಾಂಕೇತಿಕ ಆಚರಣೆ ಸಮಯ ….
ಹೊಸ ವರ್ಷಕ್ಕೆ ಹೊಸ ಅಭಿಯಾನ ಒಂದನ್ನು ಆರಂಭಿಸಿದ್ದರೂ.. 2021ರ ಒಂದು ಪಕ್ಷಿ ನೋಟದೊಡನೆ ಸುಖ- ದುಃಖ ಎನ್ನದೇ ಎಲ್ಲದ್ದಕ್ಕೂ ಕೃತಜ್ಞತೆ ತೋರುವ ಸಲುವಾಗಿ ಥ್ಯಾಂಕ್ಯೂ_ಹೇಳೋಣ ಎಂದು.. ಹೌದು 2021 ಬಹಳಷ್ಟು ಹೊಸ ಅನುಭವಗಳನ್ನು ನೀಡಿತು. ನೋವು ನಲಿವುಗಳ ಸಮ್ಮಿಶ್ರಣ ಈ ವರ್ಷ. 2021 ಆರಂಭವಾದುದ್ದೇ ಸಾವು ಹಾಗೂ ಭಯದಿಂದ. ಹೌದು ಈ ಬಾರಿಯ ವರ್ಷದ ಆರಂಭ ನೋವಿನಿಂದಲೇ ಶುರುವಾಗಿತ್ತು.ನನ್ನವರು ಯಾರೆಂದು ತಿಳಿ ಹೇಳಿದ ವರ್ಷ…..
ಕಳೆದೆರಡು ವರ್ಷ ಮಧ್ಯಮ ವರ್ಗದ ಜನಕ್ಕೆ ಕರೋನಾ ಸಾಕಷ್ಟು ಹೊಡೆತ ಕೊಟ್ಟಿದ್ದು ವಾಸ್ತವ. ಅದರಲ್ಲೂ ಸಣ್ಣ ಉದ್ಯಮಿಗಳು ಅನುಭವಿಸಿದ್ದು ನರಕಯಾತನೆ. ತಿಂಗಳುಗಟ್ಟಲೆ ಮುಚ್ಚಿದ ಬೇಕರಿ ಹೋಟೆಲ್ ಗಳು, ಶೂನ್ಯ ಸಂಪಾದನೆಯಲ್ಲೇ ಹೋಟೆಲ್ ಮನೆ ಬಾಡಿಗೆ ಓಟ ಮಾತ್ರ ನಿಲ್ಲಲೇ ಇಲ್ಲ. ಅದರಲ್ಲೂ ಲೋನ್ ಪಡೆದವರ ಸ್ಥಿತಿ ಹೇಳತೀರದು. ನಾಲ್ಕಾರು ತಿಂಗಳ ನಂತರ ಬಾಗಿಲು ತೆರೆದರೂ ಸರ್ಕಾರದ ಹತ್ತಾರು ಕಂಡೀಷನ್ ಅರ್ಧದಷ್ಟು ಇಲ್ಲದ ವ್ಯಾಪಾರಕ್ಕೆ ಪೂರ್ತಿ ಬಾಡಿಗೆಗೆ ಒತ್ತಡ, ಮಕ್ಕಳ ಶಾಲಾ ಫೀ, ಚೀಟಿ, ಬ್ಯಾಂಕ್ EMI ಒಂದೇ ಎರಡೇ. ಒಂದು ಹಂತದಲ್ಲಿ ಜೀವನವೇ ಸಾಕು ಅಂದವರು ಹಲವರು.
ಇದೆಲ್ಲದರ ನಡುವೆ ಪ್ರಕೃತಿ ಕೂಡ ವಿಕೃತಿ ಮೆರೆದಿದೆ. ಇದ್ದುದ್ದರಲ್ಲೇ ಸ್ವಲ್ಪ ನೆಮ್ಮದಿಯಿಂದ ಇದ್ದ ಹಳ್ಳಿಗರಿಗೆ ಶಾಕ್ ನೀಡಿದ ವರುಣ ದೇವ ಹೊತ್ತಲ್ಲದ ಹೊತ್ತಲ್ಲಿ ಆಗಮಿಸಿ ವಾರಗಟ್ಟಲೆ ಊರ ನೆಂಟನಾಗಿದ್ದು ಬೆಳೆದ ಬೆಳೆ ಕೈಗೆ ಸಿಗದಾಗಿತ್ತು. ನಗರವಾಸಿಗಳ ಪರಿಸ್ಥಿತಿ ಇದಕ್ಕೂ ಭಿನ್ನವಾಗಿರಲಿಲ್ಲ. ವಾರಗಟ್ಟಲೆ ಸುರಿದ ಮಳೆ ತಗ್ಗು ಪ್ರದೇಶ ಅಪಾರ್ಟ್ಮೆಂಟ್ ಪಾರ್ಕಿಂಗ್ ಸ್ಥಳಕ್ಕೆ ನುಗ್ಗಿ ತನ್ನ ಅಟ್ಟಹಾಸ ಮೆರೆದು ಕುಡಿವ ನೀರು, ತಿನ್ನೋ ಅನ್ನಕ್ಕೂ ಕಲ್ಲು ಹಾಕಿತ್ತು. ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿ ಅಣಕಿಸಿ ಕೇಕೆ ಹಾಕಿತ್ತು.ಮಾನವನನ್ನು ಸೋಲಿಸಿ ಪ್ರಕೃತಿ ಮತ್ತೊಮ್ಮೆ ವಿಕೃತಿ ಮೆರೆದಿತ್ತು.
ಸಮಸ್ಯೆಯ ಸರಮಾಲೆ ಹೊತ್ತ ವರ್ಷದಲ್ಲಿ ಕರೋನಾವನ್ನು ಹಿಂದಿಕ್ಕಿ ಓಡಿದ್ದು ಪೆಟ್ರೋಲ್, ಡಿಸೇಲ್ ಗ್ಯಾಸ್ ದರ. ಜನಸಾಮಾನ್ಯರನ್ನು ಬಾಣಲಿಯಿಂದ ಬೆಂಕಿಗೆ ತಳ್ಳಿದ ಅಳುವ ಸರ್ಕಾರ ಮತ ನೀಡಿದವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ, ಬೆಲೆಯೇರಿಕೆ ಹೊರೆ ಹೇರಿ ತನ್ನ ಅಧಿಕಾರ ಚಲಾಯಿಸಿತ್ತು.ಸಿಕ್ಕ ಕಾರಣ ಮತ್ತದೇ ಮಹಾಮಾರಿ. ವರ್ಷದ ಕೊನೆಯಲ್ಲಿ ಉಸಿರಾಟಕ್ಕೆ ಅವಕಾಶ ನೀಡುತ್ತೆ ಅನ್ನೋವಾಗ ” ಓಮಿಕ್ರಾನ್ ” ಕೂಡ ಒಕ್ಕರಿಸಿ ಕರೋನಾ ವರ್ಷಾಂತ್ಯವನ್ನೂ ತನ್ನ ಹಿಡಿತದಲ್ಲಿಟ್ಟು ಇಡೀ ವರ್ಷ ತನ್ನದೇ ಎಂದು ಅಟ್ಟಹಾಸ ಮೆರೆದಿದೆ.
ಕೆಲವರ ಸಾವು ನೋವುಗಳು ಮನಸ್ಸು ಹಿಂಡಿದ್ದು ಸುಳ್ಳಲ್ಲ.. ಎಲ್ಲಕ್ಕಿಂತ ಹೆಚ್ಚಾಗಿ ಈ ವರ್ಷ ಕೊರಾನಾ ವ್ಯಾಕ್ಸಿನೇಷನ್ ನಮಗೆಲ್ಲ ಸಿಕ್ಕಿತು ಎಂಬುದೇ ಅತಿ ದೊಡ್ಡ ಖುಷಿ.ಇದಕ್ಕಾಗಿ ನಮ್ಮ ಆರೋಗ್ಯ ಸಿಬ್ಬಂದಿಗೆ ಸರ್ಕಾರಕ್ಕೆ ಹಾಗೂ ವ್ಯಾಕ್ಸಿನ್ ತಯಾರಕರಿಗೆ ಒಂದಷ್ಟು ಧನ್ಯವಾದ ಹೇಳಲೇ ಬೇಕು.
ಏನೇ ಆದರೂ ನಮ್ಮ ಬದುಕಿನ ಮತ್ತೊಂದು ಭಿನ್ನ ಪರಿಯನ್ನು ಈ ವರ್ಷ ಕಲಿಸಿಕೊಟ್ಟಿತು.ಮತ್ತಷ್ಟು ಮೌನದ ಮೌಲ್ಯವನ್ನು ತಿಳಿಸಿಕೊಟ್ಟಿತು. ಮತ್ತಷ್ಟು ಪ್ರಬುದ್ಧ ಆಲೋಚನೆಯತ್ತ ಸಾಗಲು ಅಣಿ ಮಾಡಿಕೊಟ್ಟಿತು…ಸಂವೇಗಾತ್ಮಕ ಪರಿಪಕ್ವತೆಯನ್ನು ಕಲಿಸಿಕೊಟ್ಟಿತು..ಒಂದಷ್ಟು ತಾಳ್ಮೆ ಮತ್ತು ಸಂಯಮ,ಹೊಸ ಪರಿಚಯಗಳು, ಚಟುವಟಿಕೆಗಳು ಆಲೋಚನೆಗಳು ಇನ್ನೊಂದಷ್ಟು ದೃಷ್ಟಿಕೋನಗಳು ಹೊಸ ಜೀವನಕ್ಕೆ ಚೈತನ್ಯ ತುಂಬಿದ್ದು ಸುಳ್ಳಲ್ಲ..ಈ ವರ್ಷ ನಮ್ಮನ್ನು ಬಹಳಷ್ಟು ಬದಲಿಸಿತ್ತು ನಮ್ಮವರು ಯಾರೆಂದು ಕೂಗಿ ಹೇಳಿತ್ತು.
ನೆನಪಿಡಿ ಗೆಳೆಯರೇ, ಹೊಸ ವರ್ಷ ಹೊಸತು ತರುವುದರಲ್ಲಿ ಎರಡು ಮಾತಿಲ್ಲ .ಯಾವುದಕ್ಕೂ ಎದೆಗುಂದದಿರಿ. ಕರೋನಾ ಈಗಾಗಲೇ ವಾಕ್ಸಿನ್ ಪಡೆದವರ ಮುಂದೆ ಸೋಲೋಪ್ಪಿದೆ. ಮುಂದಿನ ದಿನ ಸುಗಮವಾಗುವ ಸೂಚನೆ ಸಿಕ್ಕಿದೆ.ಸಮಸ್ಯೆಯಿಂದ ಹೊರಬನ್ನಿ.ಎಲ್ಲದಕ್ಕೂ ಪರಿಹಾರ ಇದ್ದೆ ಇದೆ.ಎಲ್ಲ ಸಮಸ್ಯೆಯನ್ನೂ ಮಾತಿನಿಂದ ಪರಿಹರಿಸಿಕೊಳ್ಳಿ. ಮಾತು ಬಲ್ಲವಗೆ ಎಂದೂ ಸಾವಿಲ್ಲ. ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಿರಿ. 2022 ಒಂದು ಸುಂದರ ಬದುಕಿನ ವರ್ಷವಾಗಲಿ ಎಂದು ಹಾರೈಸುತ್ತಾ 2021 ಕ್ಕೆ ಗುಡ್ ಬೈ ಹೇಳಿ ಓದುಗರನ್ನು ಹೊಸ ವರ್ಷಕ್ಕೆ ಸ್ವಾಗತಿಸೋಣ …..
ಲೇಖನ : ಪ್ರಭಾಕರ ಶೆಟ್ಟಿ ಅಚ್ಲಾಡಿ.ಬೆಂಗಳೂರು ನಗರ