ಶಿರ್ವ(ಜ.13): ಇಲ್ಲಿನ ಸಂತ ಮೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋವರ್- ರೇಂಜರ್ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಜ.12 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು..

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರವಿನಂದನ್ ಭಟ್ ರವರು ಮಾತನಾಡಿ ಸ್ವಾಮಿ ವಿವೇಕಾನಂದರು ಯುವ ಸಮುದಾಯದ ಆದರ್ಶ, ಅವರ ಚಿಂತನೆಗಳು ಸಾರ್ವಕಾಲಿಕ. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್- ರೇಂಜರ್ ಸ್ವಯಂ ಸೇವಕರು ತಾಳ್ಮೆ, ಪ್ರಾಮಾಣಿಕತೆ, ಪರೋಪಕಾರ, ಸಹಾನುಭೂತಿ ಮೊದಲಾದ ಗುಣಗಳನ್ನು ಬೆಳೆಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಹೆರಾಲ್ಡ್ ಮೋನಿಸ್ರವರು ಯುವಕರು ಸಮಾಜದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ, ಉದ್ಯಮಶೀಲರಾಗಿ ರೂಪುಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ರೋವರ್- ರೇಂಜರ್ ಘಟಕದ ಅಧಿಕಾರಿಗಳಾದ ಶ್ರೀ ಪ್ರಕಾಶ್, ಶ್ರೀಮತಿ ಸಂಗೀತಾ ಹೆಚ್ ಪೂಜಾರಿ, ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಸ್ಯಾಮ್ ಜೋಯಲ್ ಡಯಾಸ್, ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂಧಿಗಳು, ಘಟಕ ನಾಯಕರು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ರೇಂಜರ್ ರಫೀದಾ ಸ್ವಾಗತಿಸಿದರು. ಯೋಜನಾಧಿಕಾರಿ ಶ್ರೀ ಪ್ರೇಮನಾಥ್ ಅಥಿತಿ ಪರಿಚಯಗೈದರು. ಸ್ವಯಂ ಸೇವಕಿಯರಾದ ವೈಷ್ಣವಿ ನಿರೂಪಿಸಿ, ಕು. ಸುಪ್ರಿಯಾ ವಂದಿಸಿದರು.










