ಬೈಂದೂರು (ಮಾ.8):ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಇದರ ಬೈಂದೂರು – ಶಿರೂರು ಘಟಕದ ಆಶ್ರಯದಲ್ಲಿ ಘಟಕದ ಯಡ್ತರೆಯ ಆಡಳಿತ ಕಛೇರಿಯಲ್ಲಿ ಮಾ.08ರಂದು “ವಿಶ್ವ ಮಹಿಳಾ ದಿನ”ವನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ COVID – 19 ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆರೋಗ್ಯ ಸುರಕ್ಷೆಗಾಗಿ ಅವಿರತವಾಗಿ ಶ್ರಮಿಸಿದ ಸಂಘಟನೆಯ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು – ಶಿರೂರು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ ಚಂದನ ಕಳವಾಡಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಎಸ್. ಕುಂದರ್ “ಇಂದು ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಮಾಡುತ್ತಿರುವ ಸಾಧನೆ ಮತ್ತು ಸೇವೆ ನಮ್ಮ ಸಮಾಜದ ಇತರ ಹಿಂದುಳಿದ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು. ಸ್ವಯಂಪ್ರೇರಣೆಯಿಂದ ಸೇವಾವೃತ್ತಿಯನ್ನು ಕೈಗೊಂಡು ನಮ್ಮ ನಡುವೆ ಎಲೆಮರೆಯ ಕಾಯಿಯಂತಿರುವ ಆಶಾ ಕಾರ್ಯಕರ್ತೆಯರು ನೊಂದವರ, ಶುಶ್ರೂಷೆಗೊಳಪಡುವವರ ಪಾಲಿನ ಆಶಾಕಿರಣವಾಗಿದ್ದಾರೆ” ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಗೌರವ ಸ್ವೀಕರಿಸಿದ ತಾಲೂಕು ಕಛೇರಿಯ ಉಪ ತಹಶೀಲ್ದಾರರಾದ ಶ್ರೀಮತಿ ಗಿರಿಜಾ ಈಶ್ವರ ಮೊಗೇರರವರು ಸಂಘಟನೆಗೆ ಸ್ಪಂದಿಸಿ, ತೊಡಗಿಸಿಕೊಂಡ ಮಹಿಳೆಯರು ಹಾಗೂ ಆಶಾ ಕಾರ್ಯಕರ್ತೆಯರ ಪರಿಶ್ರಮವನ್ನು ಪ್ರಶಂಸಿಸಿ ಅಭಿನಂದಿಸಿದರು.ಜಿಲ್ಲಾ ಘಟಕದ ಪ್ರತಿನಿಧಿಯಾಗಿ ಆಗಮಿಸಿ ಮುಖ್ಯ ಅತಿಥಿಯ ನೆಲೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಶ್ರೀಮತಿ ಗುಲಾಬಿ ದೇವದಾಸ್ ಮೊಗವೀರ ಕೋಟ ಇವರು ಸಂಘಟನೆಯಲ್ಲಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಎದುರಿಸುವ ಸವಾಲುಗಳನ್ನು ಉತ್ತರಿಸುವ ಕುರಿತು ಮಾತನಾಡಿದರು.
ಗೌರವ ಸನ್ಮಾನ ಸ್ವೀಕರಿಸಿದ ಆಶಾ ಕಾರ್ಯಕರ್ತೆಯರು ತಮ್ಮ ವೃತ್ತಿಬದುಕಿನ ಅನುಭವಗಳನ್ನು ಹಂಚಿಕೊಂಡರು. ಸಂಘಟನೆಯ ಬೈಂದೂರು ಘಟಕದ ಗೌರವಾಧ್ಯಕ್ಷರಾದ ಶ್ರೀ ವಸಂತ ಬಿ. ತಗ್ಗರ್ಸೆ, ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಕೃಷ್ಣ ಮೊಗವೀರ ಬೈಂದೂರು, ಜಯಂತ್ ಅಮೀನ್ ಕೋಟ, ಸಂಘಟನಾ ಕಾರ್ಯದರ್ಶಿ ಗಂಗಾಧರ ಮೊಗವೀರ ಪಡುವರಿ, ಶ್ರೀಮತಿ ಹೇಮಾ ತೆಕ್ಕಟ್ಟೆ, ಸಮಿತಿ ಸದಸ್ಯರಾದ ಶ್ಯಾಮಲಾ ಅಶೋಕ್ ಕೋಟ ಮೊಗವೀರ ಮಹಾಜನ ಸೇವಾ ಸಂಘ (ರಿ.) ಬಗ್ವಾಡಿ ಹೋಬಳಿಯ ಗೌರವ ಸಲಹೆಗಾರರಾದ ಶ್ರೀ ರಾಮ ಎನ್. ಮೊಗೇರ ಅಳ್ವೆಗದ್ದೆ, ಘಟಕದ ಗೌರವ ಸಲಹೆಗಾರರಾದ ಶ್ರೀ ನಾಗರಾಜ್ ಚಂದನ್ ತಗ್ಗರ್ಸೆ, ಶ್ರೀ ಜಗನ್ನಾಥ ಎಂ. ಕರ್ಕಿಕಳಿ, ಶ್ರೀ ಸಂಜೀವ ಎಂ. ದೊಂಬೆ ಮುಂತಾದ ಸಂಘಟನೆಯ ಗಣ್ಯರು, ಪದಾಧಿಕಾರಿಗಳು, ಸಮಾಜದ ಗುರಿಕಾರರು ಹಾಗೂ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘಟನೆಯ ಉಪಾಧ್ಯಕ್ಷೆ ಶ್ರೀಮತಿ ಆಶಾ ನಾಗೂರು ಪ್ರಾರ್ಥಿಸಿ, ಕಾರ್ಯದರ್ಶಿ ಶ್ರೀ ಗೌತಮ್ ತಗ್ಗರ್ಸೆ ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ಪಾಂಡುರಂಗ ಅಳ್ವೆಗದ್ದೆ ಕಾರ್ಯಕ್ರಮವನ್ನು ನಿರೂಪಿಸಿದರು.