ಕುಂದಾಪುರ: ಶ್ರೀ ಶಾರದ ಕಾಲೇಜು ಬಸ್ರೂರು ಇದರ ಐಕ್ಯೂಎಸಿ ,ಇತಿಹಾಸ ವಿಭಾಗ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಗೊಳ್ಳಲಿರುವ ಪುರಾತತ್ವ ದಾಖಲೀಕರಣ ಮತ್ತು ಅಧ್ಯಯನ ಕೇಂದ್ರ ಹಾಗೂ ಕನ್ನಡ ಪ್ರಾತಿನಿಧಿಕ ಸರ್ಟಿಫಿಕೇಟ್ ಕೋರ್ಸುಗಳನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜಗದೀಶ ಶೆಟ್ಟಿ ಉದ್ಘಾಟಿಸಿದರು. ಅವರು ಜನವರಿ 27ರಂದು ಕಾಲೇಜಿನಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸುಗಳನ್ನು ಉದ್ಘಾಟಿಸಿ ಬಸ್ರೂರಿನ ಮಹತ್ವದ ಬಗ್ಗೆ ತಿಳಿಸಿದರು.
ಬಸ್ರೂರು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡ ಊರಾಗಿದ್ದು, ಸರಿಸುಮಾರು 2000 ವರ್ಷಕ್ಕಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ಬಸ್ರೂರು ಅಳುಪರು ,ವಿಜಯನಗರ, ಪೋರ್ಚುಗೀಸರು ಮತ್ತು ಬ್ರಿಟಿಷರ ಕಾಲದಲ್ಲಿ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಆ ನಿಟ್ಟಿನಲ್ಲಿ ಬಸ್ರೂರಿನ ಇತಿಹಾಸ ಹಾಗೂ ಶಾಸನಗಳ ದಾಖಲೀಕರಣ ಹಾಗೂ ಸಂರಕ್ಷಣೆ ಮಹತ್ವಪೂರ್ಣದ್ದಾಗಿದೆ ಎಂದು ಅವರು ಹೇಳಿದರು. ಅದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಶಾರದಾವಾಣಿ ಯನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಾಹಿತಿ ಡಾ. ಕನರಾಡಿ ವಾದಿರಾಜ್ ಭಟ್ ಅನಾವರಣಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಾವತಿ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೂರಜ್ ಭಟ್, ಪ್ರದೀಪ ಬಸ್ರೂರು ಉಪನ್ಯಾಸಕ ಚಂದ್ರ ಜಪ್ತಿ ಉಪಸ್ಥಿತರಿದ್ದರು. ಐಕ್ಯೂಎಸಿ ಘಟಕದ ಸಂಯೋಜಕರಾದ ಪುರುಷೋತ್ತಮ ಬಲ್ಯಾಯ ಸ್ವಾಗತದೊಂದಿಗೆ ಪ್ರಸ್ತಾಪಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು. ಉಪನ್ಯಾಸಕ ರಾಘವೇಂದ್ರ ಶೆಟ್ಟಿ ವಂದಿಸಿದರು. ಅನಿತಾ ವಿ.ಎಂ. ಕಾರ್ಯಕ್ರಮ ನಿರೂಪಿಸಿದರು.