ಕುಂದಾಪುರ(ಅ21): ಕುಂದಾಪುರ ತಾಲೂಕು ಯುವ ಬಂಟರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಡಾ. ಬಿ ಬಿ ಹೆಗ್ಡೆ ಕಾಲೇಜು, ಭಂಡಾಕರ್ಸ್ ಕಾಲೇಜು ಹಾಗೂ ಕೋಟೇಶ್ವರದ ಶ್ರೀ ಕಾಳವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇಲ್ಲಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಶನಿವಾರ ನಡೆಯಿತು.
ಉದ್ಯಮಿ ಕೇದೂರು ಜಯರಾಮ ಜಿ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಡಾ. ಮಂದಾರ ಶೆಟ್ಟಿ ಮಾತನಾಡಿ ರಕ್ತದಾನ ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಮಹಾದಾನ. ವಾರ್ಷಿಕವಾಗಿ ಸರಾಸರಿ 60,000 ಅಪಘಾತಗಳು ಆಗುತ್ತಿದ್ದು ಈ ಪೈಕಿ 25 ರಿಂದ 30 ಮಿಲಿಯನ್ ಜನರು ಗಾಯಾಳುಗಳಾಗುತ್ತಿದ್ದಾರೆ. ಅವರಿಗೆಲ್ಲ ತುರ್ತಾಗಿ ರಕ್ತದ ಅವಶ್ಯಕತೆ ಬಹಳಷ್ಟು ಇರುತ್ತದೆ. ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುವ ಇಂತಹ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್ ಜಯಕರ ಶೆಟ್ಟಿ, ಶಂಕರನಾರಾಯಣ ಗೇರುಬೀಜ ಕಾರ್ಖಾನೆ ಮಾಲೀಕರಾದ ಶ್ರೀ ಶಶಿಧರ್ ಶೆಟ್ಟಿ, ಉದ್ಯಮಿ ಜಯಪ್ರಕಾಶ್ ಶೆಟ್ಟಿ, ಕುಂದಾಪುರ ಕೋಸ್ಟಲ್ ನ ಅಧ್ಯಕ್ಷ ಲ.ವಸಂತರಾಜ್ ಶೆಟ್ಟಿ, ಡಾ. ಬಿ.ಬಿ ಹೆಗ್ಡೆ ಕಾಲೇಜು ಪ್ರಾಂಶುಪಾಲ ಪ್ರೊ. ಕೆ ಉಮೇಶ ಶೆಟ್ಟಿ , ಭಂಡಾಕರ್ಸ್ ಕಾಲೇಜು ಪ್ರಾಂಶುಪಾಲ ಡಾ. ಶುಭಕರಾಚಾರ್ಯ, ಹಾಗೂ ಕೋಟೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್, ಸಂಘದ ಗೌರವಾಧ್ಯಕ್ಷ ಬಿ ಉದಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ, ಸಂಚಾಲಕ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಎನ್ ಎಸ್ ಎಸ್ ಯೋಜನಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ವೇಳೆ ಅಗ್ನಿವೀರ ಆಗಿ ಸೇನಾ ತರಬೇತಿಗೆ ಆಯ್ಕೆಯಾದ ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಕೆರಾಡಿಯ ಪ್ರಜ್ವಲ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು 73 ಯೂನಿಟ್ ರಕ್ತ ಸಂಗ್ರಹವಾಯಿತು. ಮೂವರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಯಿತು.
ಡಾIಬಿ.ಬಿ ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ವಂದಿಸಿದರು. ಕೋಶಾಧಿಕಾರಿ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.