ಕುಂದಾಪುರ (ಆ,15): ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 78 ನೇ ಸ್ವಾತಂತ್ರ್ಯೋತ್ಸವ ನೆರವೇರಿತು. ಧ್ವಜಾರೋಹಣಗೈದು ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಶ್ರೀ. ಗಣಪತಿ ಖಾರ್ವಿ ಇವರು ಮಾತನಾಡಿ “ದೇಶಾಭಿಮಾನ ನಮ್ಮ ವಿದ್ಯಾರ್ಥಿಗಳ ಮನ ಮನೆಯಲ್ಲಿ ನೆಲೆಯಾಗಬೇಕು. ದೇಶ ನನಗೇನು ಕೊಟ್ಟಿದೆ ಎಂದು ಪ್ರಶ್ನಿಸದೆ ದೇಶಕ್ಕಾಗಿ ನಾನೇನು ಕೊಡಬೇಕಾಗಿದೆ ಎಂದು ಯೋಚಿಸಬೇಕು” ಎಂಬ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ. ಕೆ. ಎಂ ಅಬ್ದುಲ್ ರೆಹಮಾನ್ ಶುಭ ಹಾರೈಸಿದರು.ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ. ಆಸೀಫ್ ಬ್ಯಾರಿ ಮಾತನಾಡಿ “ಬೇರೆಲ್ಲಾ ಕಾಯಕಕ್ಕಿಂತ ಸೈನಿಕನಾಗುವ ಭಾಗ್ಯ ಅತೀ ಪುಣ್ಯದಾಯಕವಾದದ್ದು, ವಿದ್ಯಾರ್ಥಿಗಳು ದೇಶ ಕಾಯುವ ರಕ್ಷಕರಾಗಬೇಕು” ಎಂದು ನುಡಿದರು.
ಸಮಾರಂಭದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಶಾಲಾಭಿವೃದ್ಧಿ ಸಮಿತಿ ಹಾಗೂ ಸಲಹಾ ಮಂಡಳಿಯ ಸರ್ವ ಸದಸ್ಯರು, ಕುಂದಾಪುರ ಪುರಸಭಾ ಸದಸ್ಯರು, ಊರಿನ ಪ್ರಮುಖರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಮೂಹ ಗಾಯನ ಮೊಳಗಿತು. ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯೊಂದಿಗೆ ” ಸ್ವಚ್ಛ ಕಡಲತೀರ – ಹಸಿರು ಕೋಡಿ” ಯ 33 ನೇ ಅಭಿಯಾನದ ಅಂಗವಾಗಿ ಸಾವಿರ ಸಸಿಗಳನ್ನು ನೆಡುವ ಕಾರ್ಯವನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸರ್ವಸಿಬ್ಬಂದಿಗಳು ವಿದ್ಯಾರ್ಥಿ ಸಮೂಹದೊಂದಿಗೆ ಯಶಸ್ವಿಯಾಗಿ ನೆರವೇರಿಸಿದರು. ಕನ್ನಡ ಉಪನ್ಯಾಸಕ ಡಾ. ಸಂದೀಪ್ ಕುಮಾರ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ವಂದಿಸುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು.