ಗಂಗೊಳ್ಳಿ (ಫೆ:19) ಸುಶಿ ಗ್ಲೋಬಲ್ ರಿಸರ್ಚ್ ಸೆಂಟರ್ ವತಿಯಿಂದ ಮರವಂತೆಯ ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳ ಮೂಲಕ ವಿದ್ಯುತ್ ಉತ್ಪಾದನೆಯ ಬಹುದೊಡ್ಡ ಮಹತ್ವಾಕಾಂಕ್ಷೆಯ ಯೋಜನೆಗೆ ಗುದ್ದಲಿ ಪೂಜೆಯ ಕಾರ್ಯಕ್ರಮ ನೆರವೇರಿತು.
ಈಗಾಗಲೇ ಮಲ್ಪೆ ಹಾಗೂ ಕೆಮ್ಮಣ್ಣು ಕಡಲ ತೀರದಲ್ಲಿ ಸಮುದ್ರದ ಅಲೆಗಳ ಶಕ್ತಿಯಿಂದ ವಿದ್ಯುತ್ತನ್ನು ಯಶಸ್ವಿಯಾಗಿ ಈ ಸಂಸ್ಥೆ ಉತ್ಪಾದಿಸುತ್ತಿದೆ. ಮರವಂತೆಯಲ್ಲಿ ವಿಜ್ಞಾನಿಯಾದ ಶ್ರೀಯುತ ವಿಜಯಕುಮಾರ್ ಹೆಗ್ಡೆಯವರ ಸಾರಥ್ಯದಲ್ಲಿ ಹತ್ತು ಕಿಲೋವ್ಯಾಟ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ವಿದ್ಯುತ್ತನ್ನು ಉತ್ಪಾದಿಸುವ ಆಕಾಂಕ್ಷೆಯನ್ನು ಈ ಸಂಸ್ಥೆ ಹೊಂದಿರುತ್ತದೆ. ಸಂಸ್ಥೆಯ ಈ ಕಾರ್ಯಕ್ಕೆ ಈಸ್ಟ್ ವೆಸ್ಟ್ ಸಮೂಹ ಸಹಯೋಗ ನೀಡುತ್ತಿದೆ.
ಅರ್ಚಕ ನರಸಿಂಹ ಅಡಿಗ ರವರು ಭೂಮಿ ಪೂಜೆಯನ್ನು ನೆರವೇರಿಸಿದರು. ಮೀನಾಕ್ಷಿ ಹೆಗ್ಡೆ, ಮೋಹಕ ರಾಜ ಹೆಗ್ಡೆ, ಸತೀಶ್ ಶೆಟ್ಟಿ ಪುತ್ತೂರು ಮರವಂತೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಂಚಾಯತ್ ರಾಜ್ ತಜ್ಞ ಕೆ.ಎಸ್ ಜನಾರ್ಧನ್, ವರಾಹ ದೇವಸ್ಥಾನದ ಮಾಜಿ ಧರ್ಮದರ್ಶಿ ಕೆ.ರಾಮಚಂದ್ರ ಹೆಬ್ಬಾರ್, ನಾಗರಾಜ ಖಾರ್ವಿ, ಕರುಣಾಕರ ಆಚಾರ್, ದಯಾನಂದ ಬಳೆಗಾರ, ರವಿ ಮಡಿವಾಳ, ಪ್ರಭಾಕರ್ ಖಾರ್ವಿ, ಸಂಜೀವ ಖಾರ್ವಿ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂತಹ ಮಹತ್ವಕಾಂಕ್ಷೆ ಯೋಜನೆ ಕರಾವಳಿ ಭಾಗದಲ್ಲಿ ಅನುಷ್ಠಾನಗೊಳ್ಳುತ್ತಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ.