ಉಡುಪಿ(ಜು ,4):ಉಡುಪಿ ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಬುಧವಾರ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗಾಗಿ ವಿಷಯಾಧಾರಿತ ಕಾರ್ಯಗಾರವು ನಡೆಯಿತು.
ಉಡುಪಿ ಜಿಲ್ಲಾ ಪದವಿಪೂರ್ವ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಮಾರುತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರೊಟೇರಿಯನ್ ಸತೀಶ್ ಶೆಟ್ಟಿ ಹದಿಹರೆಯದ ಸವಾಲುಗಳು ಮತ್ತು ಎದುರಿಸಬೇಕಾದ ವಿಧಾನಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪಿ. ಎಸ್. ಐತಾಳ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರ ಸಂಘದಿಂದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಹೊರತರಲಾದ ದ್ವಿತೀಯ ಪಿಯುಸಿ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನದ ಮೂರು ಮಾರ್ಗದರ್ಶಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಈ ಪುಸ್ತಕಗಳನ್ನು ಹೊರ ತರುವಲ್ಲಿ ಅಪಾರ ಶ್ರಮವಹಿಸಿದ ಹಿರಿಯ ಉಪನ್ಯಾಸಕಿ ಹೇಮಲತಾ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ರತ್ನಾಕರ ಪೂಜಾರಿ, ಹೇಮಲತಾ, ನರೇಂದ್ರ ಎಸ್ ಗಂಗೊಳ್ಳಿ ಮತ್ತು ಶ್ರೀದೇವಿ ಬಾಳಿಗ ಅವರು ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯಶಾಸ್ತ್ರ ವಿಷಯಗಳ ಬಗ್ಗೆ ವಿಚಾರಗಳನ್ನು ಪ್ರಸ್ತುತಪಡಿಸಿದರು.
ಉಪನ್ಯಾಸಕ ಸಂಜೀವ ಕೋಟ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷೆ ಚಂದ್ರಕಲಾ ಸ್ವಾಗತಿಸಿದರು. ಉಪನ್ಯಾಸಕಿ ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರ ಸಂಘದ ಕಾರ್ಯದರ್ಶಿ, ಸುಮಂಗಲ ಧನ್ಯವಾದ ಸಮರ್ಪಿಸಿದರು