ಕುಂದಾಪುರ(ಫೆ.25): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ವಿ. ವಿ. ಕುಂದಾಪುರ ವಲಯ ಮಟ್ಟದ ಅಂತರ್ಕಾಲೇಜು ಮಹಿಳಾ ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭ ಫೆ. 24ರ ಸಂಜೆ 4.30ಕ್ಕೆ ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದಲ್ಲಿ ನಡೆಯಿತು.
ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಇದರ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತ್ತಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜ್ಯೋತಿ ಜ್ಯುವೆಲ್ಲರ್ಸ್ ಮಾಲಕರಾದ ಶ್ರೀ ಎನ್. ಕೃಷ್ಣಮೂರ್ತಿ ಶೇಟ್, ಡಿಜಿಟೆಕ್ ಸೊಲ್ಯೂಷನ್ಸ್ ಕುಂದಾಪುರದ ಮಾಲಕ, ಕಾಲೇಜಿನ ಪೂರ್ವ ವಿದ್ಯಾರ್ಥಿ ಶ್ರೀ ದಿಗಂತ್ ಶೆಟ್ಟಿ ಉಪಸ್ಥಿತರಿದ್ದರು.

ಈ ಪಂದ್ಯಕೂಟದಲ್ಲಿ ಕುಂದಾಪುರ ವಲಯದ ಒಟ್ಟು 9 ತಂಡಗಳು ಭಾಗವಹಿಸಿದ್ದವು. ಸರ್ಕಾರಿ ಪ್ರ.ದ. ಕಾಲೇಜು, ಶಂಕರನಾರಾಯಣ ಪ್ರಥಮ ಸ್ಥಾನ, ಆತಿಥೇಯ ಡಾ| ಬಿ. ಬಿ. ಹೆಗ್ಡೆ ಕಾಲೇಜು ದ್ವಿತೀಯ, ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರ.ದ. ಕಾಲೇಜು ತೃತೀಯ ಹಾಗೂ ವರಸಿದ್ಧಿವಿನಾಯಕ ಪ್ರ.ದ,.ಕಾಲೇಜು ಕೆರಾಡಿ ಚತುರ್ಥ ಸ್ಥಾನಗಳನ್ನು ಪಡೆದುಕೊಂಡವು. ಪಂದ್ಯಕೂಟದ ಅತ್ಯುತ್ತಮ ಆಟಗಾರ್ತಿಯರಾಗಿ ಶಂಕರನಾರಾಯಣ ಸರ್ಕಾರಿ ಪ್ರ.ದ. ಕಾಲೇಜಿನ ರಶ್ಮಿತಾ ಹಾಗೂ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ನಿಸರ್ಗ ಪ್ರಶಸ್ತಿಯನ್ನು ಸ್ವೀಕರಿಸಿದರು.
ತೀರ್ಮಾನಕಾರರಾಗಿ ವಿ.ಕೆ.ಆರ್. ಹೈಸ್ಕೂಲ್ ಆಂಗ್ಲಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ಶ್ರೀ ರಾಜೇಂದ್ರ ಶೆಟ್ಟಿ, ಸ್ಟೆಲ್ಲಾ ಮೇರೀಸ್ ಪ್ರೌಢಶಾಲೆ ಗಂಗೊಳ್ಳಿ ಇದರ ದೈಹಿಕ ಶಿಕ್ಷಕರಾದ ಶ್ರೀಧರ್ ಮೇಸ್ತ ಹಾಗೂ ಪ್ರಣಯ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ರಂಜಿತ್ ಟಿ. ಎನ್, ಕ್ರೀಡಾ ಕಾರ್ಯದರ್ಶಿ ವಿದ್ಯಾರ್ಥಿ ಲಕ್ಷ್ಮೀಶ್ ಮಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಸುದಕ್ಷಿಣಾ ಎ. ಎಸ್. ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಪೃಥ್ವಿಶ್ರೀ ಜಿ. ಶೆಟ್ಟಿ ವಿಜೇತರ ಪಟ್ಟಿಯನ್ನು ವಾಚಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.










