ವಂಡ್ಸೆ (ಮಾ. 2): ನಾಡೋಜಾ.ಡಾ.ಜಿ.ಶಂಕರ್ ಪ್ರವರ್ತಿತ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಉಡುಪಿ ವತಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ‘ಅಮ್ಮ’ ವಿಶ್ರಾಂತಿಗೃಹವನ್ನು ನಿರ್ಮಿಸಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಮಾ.3 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಸಂಸದರಾದ ಬಿ. ವೈ. ರಾಘವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬೈಂದೂರು ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತಾಧಿಕಾರಿ ಹಾಗೂ ಸಹಾಯಕ ಕಮಿಷನರ್ ಕೆ.ರಾಜು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ಮಹೇಶ್, ಕೊಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅರ್ಚಕರಾದ ಶ್ರೀ ರಾಮಚಂದ್ರ ಅಡಿಗ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.
ಸುಮಾರು 2.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ “ಅಮ್ಮ” ವಸತಿಗೃಹವು 14 ಕೊಠಡಿ, ಊಟದ ಹಾಲ್, ಆಧುನಿಕ ಅಡುಗೆಮನೆ, ವಿಶಾಲವಾದ ಮೀಟಿಂಗ್ ಹಾಲ್ ಹೊಂದಿದ್ದು, ಲಿಫ್ಟ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ವಿಶ್ವವಿಖ್ಯಾತ ಕೊಲ್ಲೂರು ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ವಸತಿ ಗ್ರಹ ನಿರ್ಮಾಣ ಮಾಡಲಾಗಿದ್ದು ಭಕ್ತರು ಇದರ ಪ್ರಯೋಜನ ಪಡೆದರೆ ಅದೇ ನಮಗೆ ಸಂತ್ರಪ್ತಿ ಎಂದು ನಾಡೋಜಾ ಡಾ.ಜಿ ಶಂಕರ್ ತಿಳಿಸಿದ್ದಾರೆ.