ಕುಂದಾಪುರ(ಏ,14) : ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 130 ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ 114ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಅನುರಣಿಸಿಬೇಕಾದ,ಪ್ರತಿಫಲಿಸಬೇಕಾದ ಎರಡು ಹೆಸರುಗಳು, ವಿಶ್ವವಿಧಿತವಾದ ವ್ಯಕ್ತಿತ್ವಗಳು ಡಾ. ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನ ರಾಮ್. ಅಂಬೇಡ್ಕರ್ ಅವರು ಪ್ರಜಾಸತ್ತೆಯಲ್ಲಿ ನಂಬಿಕೆಯುಳ್ಳ ಸಮಾಜವಾದಿ, ವಿಶೇಷವಾಗಿ ವಾಸ್ತವವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾನ್ ಮಾನವತಾವಾದಿ, ಮಾನವಶಾಸ್ತ್ರಜ್ಞ, ರಾಷ್ಟ್ರೀಯವಾದಿ, ಶೋಷಿತ ಸಮುದಾಯಗಳ ಬದುಕಿನ ಆಶಾಕಿರಣ, ಪುಸ್ತಕ ಪ್ರೇಮಿ, ವಿಚಾರವಾದಿ, ಧೀಮಂತ ನ್ಯಾಯಶಾಸ್ತ್ರಜ್ಞ ಹಾಗೂ ಮುಖ್ಯವಾಗಿ ಮಾರ್ಕ್ಸ್, ಗಾಂಧಿ, ಲೋಹಿಯಾ ಅವರಿಗಿಂತ ಭಿನ್ನವಾಗಿ ಸಾಮಾಜಿಕ ಮೌಲಿಕತೆಯನ್ನು ಸಾರಿದ ಮಹಾನ್ ಚಿಂತಕ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಅಂಬೇಡ್ಕರರ ಸ್ತ್ರೀವಾದಿ ನೆಲೆಯ ಚಿಂತನೆಗಳನ್ನು, ಪ್ರಾದೇಶಿಕ ಭಾಷೆಗೆ ನೀಡಿದ ಮಹತ್ವವನ್ನು ಹಾಗೂ ಅವರ ಜೀವನ ಮೌಲ್ಯಗಳ ಕುರಿತು ಹೇಳಿದರು.
ಡಾ ಬಾಬು ಜಗಜೀವನರಾಮ್ ಅವರದ್ದು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿತ್ವ. ಕಾರ್ಮಿಕ ಸಚಿವರಾಗಿ ಕನಿಷ್ಠ ಕೂಲಿ ಕಾಯ್ದೆ, ಕಾರ್ಮಿಕರ ಪರ ಧ್ವನಿಯೆತ್ತಿದವರು. ರಕ್ಷಣಾ ಸಚಿವರಾದ ಸಂದರ್ಭದಲ್ಲಿ ಬಾಂಗ್ಲಾ ವಿಮೋಚನೆಯ ಸಮಯದಲ್ಲಿ ಸೈನಿಕರ ಪರ ಹಾಗೂ ಕೃಷಿ ಸಚಿವರಾಗಿ ಕೃಷಿ ಆಧುನೀಕರಣ ಮತ್ತು ಸಾರ್ವಕಾಲಿಕವಾದ ಹಸಿರು ಕ್ರಾಂತಿ ಯೋಜನೆಯನ್ನು ಜಾರಿಗೆ ತಂದರು. ದುಡಿಯುವ ವರ್ಗದ ಜನರ ಪರ ಧ್ವನಿಯೆತ್ತಿದ ಮೊದಲ ಮಹಾನಾಯಕ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಎಚ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿಜಯ್ ಎಸ್. ಪೂಜಾರಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶೋಭಾ ಜಿ. ಪುತ್ರನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಲತಾ ಸುರೇಶ್ ಶೆಟ್ಟಿ, ಪೊಲೀಸ್ ಉಪ ಅಧೀಕ್ಷಕರಾದ ಶ್ರೀಕಾಂತ್.ಕೆ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಪುರಸಭೆಯ ಸದಸ್ಯ ಪ್ರಭಾಕರ್ ಉಪಸ್ಥಿತರಿದ್ದರು.
ತಹಶೀಲ್ದಾರ್ ಕೆ.ಬಿ.ಆನಂದಪ್ಪ ನಾಯ್ಕ್ ಪ್ರಸ್ತಾವಿಸಿದರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ.ಆರ್. ವೆರ್ಣೇಕರ್ ಸ್ವಾಗತಿಸಿದರು, ಕಚೇರಿ ಅಧೀಕ್ಷಕರಾದ ರಮೇಶ್ ಕುಲಾಲ್ ವಂದಿಸಿದರು, ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು