ಕುಂದಾಪುರ (ಏ, 18): ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿ ಈಗ ಮುಕ್ತಾಯ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಫ್ಲೈಓವರ್ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆಯನ್ನು ನವಯುಗ ಕಂಪೆನಿ ಎದುರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿ ಇದರ ಸಂಚಾಲಕರಾದ ಕೆಂಚನೂರು ಸೋಮಶೇಖರ ಶೆಟ್ಟಿ ಹೇಳಿದರು.
ಅವರು ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಕುಂದಾಪುರದ ಆರ್ .ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು. ಕಾಮಗಾರಿ ಮುಕ್ತಾಯದ ತರಾತುರಿಯಲ್ಲಿ ಇರುವ ನವಯುಗ ಕಂಪೆನಿ ರಾಷ್ಟ್ರೀಯ ಹೆದ್ದಾರಿಗಳನ್ನು ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿ ರಚಿಸಿದ್ದು ಮುಂದಿನ ದಿನಗಳಲ್ಲಿ ಕುಂದಾಪುರ ಭಾಗದ ಜನತೆಗೆ ಸಂಚಾರಕ್ಕೆ ತೊಂದರೆಯಾಗಲಿದ್ದು, ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಚರಂಡಿ ನೀರಿನ ಹರಿವು ಹೆಚ್ಚಾಗಿ ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಲಿದೆ. ಆದರೆ ಈ ವಿಷಯವನ್ನು ನವಯುಗ ಕಂಪನಿಯವರು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಅಂಡರ್ ಪಾಸ್ ಕಾಮಗಾರಿಗಳು ಅವೈಜ್ಞಾನಿಕತೆಯಿಂದ ಕೂಡಿದ್ದು ಘನ ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಚರ್ಚಿಸುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಕ್ಕೊತ್ತಾಯ ನಡೆಸುವುದರ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಿಶೋರ್ ಕುಮಾರ್ ಕುಂದಾಪುರ, ರಾಜೇಶ್ ಕಾವೇರಿ, ಸಾರ್ವಜನಿಕರಾದ ಮಾಧವ ನಾಯಕ್, ಶ್ರೀಪತಿ ಆಚಾರ್ಯ, ಮಹೇಶ್ ಶೆಣೈ,ಸುದೀಪ್ ವೆಂಕಟೇಶ್ ಜಯಾನಂದ ಖಾರ್ವಿ, ಹೆದ್ದಾರಿ ಹೋರಾಟ ಸಮಿತಿ ಸಾಸ್ತಾನ ಇದರ ಪ್ರತಾಪ್ ಶೆಟ್ಟಿ ,ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ವಿವೇಕ್ ನಾಯಕ್,ಪುರಸಭಾ ಸದಸ್ಯರು ಹಾಗೂ ಸ್ಥಳೀಯ ಸಂಘಟನೆಗಳ ಸದಸ್ಯರುಗಳು ಭಾಗವಹಿಸಿದ್ದರು .ಪತ್ರಕರ್ತರ ಸಂಘ ಅಧ್ಯಕ್ಷರಾದ ಶಶಿಧರ ಹೆಮ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.