ಗಂಗೊಳ್ಳಿ (ಜು,27): ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಜೊತೆ ಜೊತೆಗೆ ಮಕ್ಕಳನ್ನು ಸಂಸ್ಕಾರದ ಮೌಲ್ಯಗಳೊಂದಿಗೆ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಶಿಕ್ಷಕರ ಜವಾಬ್ದಾರಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ .ಕೆ. ಉಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಮೂರನೇ ವಾರ್ಷಿಕ ಮಹಾ ಸಭೆ , ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರದ ಅಂಗವಾಗಿ ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಕ್ರಮವಾಗಿ ಎಂಟು ಒಂಬತ್ತು ಹತ್ತನೇ ಸ್ಥಾನವನ್ನು ಗಳಿಸಿದ ಹರ್ಷಿತಾ ಎಸ್ ಪೂಜಾರಿ, ನೇಹಾ ಎಸ್ ಕೊಡೇರಿ ಮತ್ತು ಇಂಚರ ಆರ್ ದೇವಾಡಿಗ ಹಾಗೂ ಉತ್ತಮ ಸಾಧನೆ ಮಾಡಿದ ಸನ್ನಿಧಿ ಹೊಳ್ಳ, ದೀಕ್ಷಾ ಪೂಜಾರಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 8ನೇ ರಾಂಕ್ ಗಳಿಸಿದ ದೀಕ್ಷಾ ವಿ ಕಾಮತ್ ಜೊತೆಗೆ ಉತ್ತಮ ಸಾಧನೆಯನ್ನು ಮಾಡಿದ ಮಾನ್ವಿ ಎಮ್ ಪೂಜಾರಿ, ಐಶ್ವರ್ಯ ಎ ಪೂಜಾರಿ, ಆದಿತ್ಯ ಪೂಜಾರಿ ನವ್ಯಶ್ರೀ, ಶ್ರಾವ್ಯ ಮತ್ತು ಸಿಂಧು ಖಾರ್ವಿ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ದಿ. ಜಿ.ಕೆ ರಾಮದಾಸ ಕೊಡೇರಿ ಮನೆ ಇವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನದ ನಗದನ್ನು ಕೊಡ ಮಾಡಿದ ಶ್ರೀಮತಿ ರಾಧಾ ರಾಮದಾಸ್ ಪೂಜಾರಿ ಮತ್ತು ಮಕ್ಕಳ ಪರವಾಗಿ ಸುಹಾಸ ಪೂಜಾರಿ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಸೊಸೈಟಿ ಜನರಲ್ ಗ್ಲೋಬಲ್ ಸೊಲ್ಯೂಷನ್ ಚಾಪ್ಟರ್ ಮ್ಯಾನೇಜರ್ ರಣಜಿತ್ ಜಿ ಪೂಜಾರಿ, ನಿವೃತ್ತ ಇತಿಹಾಸ ಉಪನ್ಯಾಸಕ ಹೆಚ್ ಭಾಸ್ಕರ್ ಶೆಟ್ಟಿ, ಕೋಟಿ ಚೆನ್ನಯ್ಯ ಗರಡಿ ಗುಜ್ಜಾಡಿಯ ಪಾತ್ರಿ ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು. ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಮಂಜುರಾಜ್ ಗಂಗೊಳ್ಳಿ ಸ್ವಾಗತಿಸಿದರು. ಜಿ.ಕೆ ವೆಂಕಟೇಶ ಕೊಡೇರಿ ಮನೆ ಪ್ರಸ್ತಾವಿಕ ಮಾತುಗಳಾಡಿದರು. ದೀಕ್ಷಾ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಅನಂತ ಕೂಡೇರಿ ಮನೆ ವರದಿ ವಾಚಿಸಿದರು. ಅಕ್ಷತಾ ವಿನಯ್ ಪ್ರಾರ್ಥಿಸಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಹರ್ಷಿತ ಎಸ್ ಪೂಜಾರಿ ವಂದಿಸಿದರು.