ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಮಗ, ಸೋಂಕಿಗೆ ಭಯಗೊಂಡು, ಇಂದು ಊರ ದಾರಿ ಹಿಡಿದಿದ್ದ.. ದೂರದಲ್ಲೆ ಕಂಡ ಚಿಂಟು, ಗುರುತು ಹಚ್ಚಿ ಕುಂಯ್ ಗುಡುತ್ತಾ ಓಡಿ ಬಂದು ಕಾಲು ನೇವರಿಸುತಿತ್ತು.. ಅದು ಸುಮಾರು ಆರು ವರ್ಷದ ಹಿಂದಿನ ಮಾತು, ಚಿಂಟುವಿಗಾಗ ನಾಲ್ಕೇ ತಿಂಗಳು.. ಅದರ ನೆನಪಲ್ಲಿ ಇವನ ಮುಖ ಮಾಸಿರಲಿಲ್ಲ.. ಬಾಲ ಅಲ್ಲಾಡಿಸುತಿತ್ತು….
ಚಿಂಟು ಓಡಿದ್ದನ್ನು ಕಂಡು, ಅದಾಗಲೇ ಒಲೆ ಪಕ್ಕ ಇಟ್ಟ ಬಟ್ಟಲಿಗೆ ಒಂದಷ್ಟು ನೀರು ಸುರಿದು, ಅರಸಿನ ಕಲಸಿ, ಕೆಂಡದುಂಡೆಯೊಂದ ಕೈಯಿಂದ ಎತ್ತಿ ಬಟ್ಟಲಿಗೆ ಬಿಟ್ಟವಳು ಕೈ ತುದಿಯ ಸೀರೆ ಅಂಚಿಗೆ ಒತ್ತಿ ಹಿಡಿದಳು; ಸ್ವಲ್ಪ ಸುಟ್ಟಂಗಾಯಿತು. ನೀರೊಳು ಕೆಂಡ ಚುರ್ರ್ ಅಂತ ಬುಸುಗುಟ್ಟಿ ತಣ್ಣಗಾಯಿತು. ಅದನ್ನೆತ್ತಿ ಪಡಸಾಲೆ ಇಳಿದು ಅಂಗಳಕ್ಕೆ ಬಂದು ನಿಂತಳು….
****
” ಅಹಲ್ಯಾ? ಪುಟ್ಟಿ…….?”.
” ಅಮ್ಮಾ .. ಅದು…. ಅವಳನ್ನ, ಮಗೂನ ಅವರ ಮನೆಗೆ ಬಿಟ್ಟ್ ಬಂದೆ, ತಿರಗಾ ಹೋಗುವಾಗ, ಎಲ್ಲಾ ಇಲ್ಲಿಂದಾನೆ ಹೊರಡ್ತೀವಿ… ಬರ್ತಾಳ್ ಬಿಡಮ್ಮಾ .. ಒಂದ್ ವಾರ ಅಷ್ಟೇ ” … ಮೊಮ್ಮಗಳನ್ನ ನೋಡ್ ಬೇಕಂತ ಆಸೆ ಹೊತ್ತಿದ್ದ ಕಣ್ಣಂಚು ತೇವವಾಗಿತ್ತು.. ಹನಿಯೊಂದು ದೃಷ್ಟಿ ಬಟ್ಟಲೊಳು ಬಿದ್ದು ಬೆರೆಯಿತು…ಮಗನಿಗೆ ತೋರ್ಪಡಿಸದಂತೆ…..
*****
ಗಾಳಿ ತಣ್ಣಗೆ ಬೀಸುತಿತ್ತು, ಬಾನ ತುಂಬಾ ಬೆಳದಿಂಗಳು.. ಅಲ್ಲಲ್ಲಿ ಒಂದೊಂದು ತಾರೆಗಳು.. ಅಂಗಳದಲಿ ಚಾಪೆ ಹಾಸಿ ಮಲಗಿ ಏನೋ ಯೋಚಿಸುತಿದ್ದವಗೆ ಅಮ್ಮ ಕರೆದದ್ದು ಅಸ್ಪಷ್ಟವಾಗಿ ಕೇಳಿತ್ತು.. ಎದ್ದು ಕುಂತವನೆ ” ಏನಮ್ಮ” ಅಂದ… ಕಂಚಿನ ಬಟ್ಟಲಲ್ಲಿ ಅನ್ನಕ್ಕೆ ತಿಳಿಸಾರ ಕಲಿಸುತ್ತಾ ಮಗನ ಪಕ್ಕ ಕುಳಿತಳು. ಕೈತುತ್ತು ತಿನ್ನುತಿದ್ದವಗೆ ಕೊರಳು ಗದ್ಗದಸಿತು.. ಆರು ವರ್ಷ ಇವಳನ್ನ ಒಂಟಿಯಾಗಿಸಿ ಇದ್ದೆನಲ್ಲಾ. ದುಃಖ ಉಮ್ಮಳಿಸುತಿತ್ತು…ಎಷ್ಟಾದರೂ ಗಂಡು ಮಗ; ಅಳಬಾರದು; ಸೈರಿಸಿಕೊಂಡ… ಏನನ್ನಿಸಿತ್ತೋ, ಬಟ್ಟಲಿಗೆ ಕೈಯಿಟ್ಟು ಅಮ್ಮನಿಗೊಂದು ತುತ್ತ ನೀಡಿದ…ಅಮ್ಮನಿಗೋ ಸತ್ತೆನೆಂದರೂ ಸಂತಸ; ಕಣ್ತುಂಬಿ ಬಂತು……..
*****
“ಅಣ್ಣಾ… ನೀವು ಕೊಟ್ಟ ATM ತಗೊಳ್ಳಿ; ನಿಮ್ಮಮ್ಮ ಯಾವತ್ತೂ ಹಣ ತಗೊಂಡ್ ಬಾ ಅಂತ ಕೇಳೇ ಇಲ್ಲ.. ಇವತ್ತಿಗೂ ಅವ್ರ ಅನ್ನನಾ ಅವ್ರೇ ದುಡಿತಾ ಇದ್ರು.. ಅಣ್ಣಾ ನಿಂಮ್ಗೊತ್ತಾ? ನಿಮ್ಮಮ್ಮ ದಿನಾ ಬಂದ್ ಕೇಳೋರು; ನನ್ ಮಗಾ ಫೋನ್ ಮಾಡಿದ್ನಾ? .. ಅಂತ; ಏನಣ್ಣಾ ನೀವು ಅಮ್ಮಗೊಂದ್ ಕಾಲ್ ಮಾಡ್ತಾ ಇರೋದಲ್ವಾ? ವಾರಕ್ಕೊಮ್ಮೆ ಆದ್ರೂ?; ಯಾವಾಗ್ ನೋಡಿದ್ರೂ ನನ್ ಮಗಾ .. ನನ್ ಮಗಾ ಅಂತಾ ಇದ್ರು.. .. ಸರಿ ಅಣ್ಣಾ ನಾನಿನ್ ಬರ್ತಿನೀ; ಅಮ್ಮ ಕರೀತಾ ಇದಾರೆ….”
ಬಂಡೆಗೆ ಒರಗಿದವನಿಗೆ ಅಳು ಒತ್ತರಿಸಿತ್ತು.. ಅಮ್ಮ ಕಾಡುತಿದ್ದಳು… ಗಟ್ಟಿಯಾಗಿ ಅರಚಿದ… ಹರಿಯುತಿದ್ದ ಝರಿಯ ಕಲರವ ಗೌಣವಾದಂತನಿಸುತಿತ್ತು...ಸುತ್ತಲಷ್ಟೂ ಮರಗಿಡಗಳು ಮರುಗುತಿದ್ದವು…
****
ದಿನವೆಂಟು ಕಳೆಯಿತು; ಗಂಟೆ 9:45; ಎದ್ದು ಕುಂತವನಿಗೆ, ಅಮ್ಮನ ಸುಳಿವಿರಲಿಲ್ಲ.. ಕೋಣೆ ಕಡೆ ನಡೆದ..ಮಂಚದಲ್ಲಿ ಅಮ್ಮ ಇನ್ನಾ ಮಲಗೆ ಇದ್ದರು… ” ಏನಮ್ಮಾ? ಏನಾಯ್ತು? ….. ಯಾಕಿನ್ನಾ ಎದ್ದಿಲ್ಲಾ?…” ಹೊಸ್ತಿಲು ದಾಟಿ ಒಳ ಬಂದವ, ಅಮ್ಮನ ಕಾಲ ಬುಡದಲ್ಲಿ ಕೂತ.. ” ಏನಮ್ಮಾ ಹುಷಾರಿಲ್ವಾ?… ಹಣೆ ಮೇಲೆ ಕೈಯಿಟ್ಟ… ದೇಹ ತಂಪಾಗಿತ್ತು…. ದೃಷ್ಟಿ ನೇರವಿತ್ತು….ಕಣ್ಣು ಮಿಟುಕಿಸುತ್ತಿಲ್ಲ..ಉಸಿರು ನಿಂತಿತ್ತು… ಎಪ್ಪತ್ತರ ಮುದಿ ಜೀವ ಹೇಗೆ ತಾನೆ ತಡೆದೀತು…… ಪ್ರಪಂಚ ಸ್ಥಬ್ದವಾಗಿತ್ತು…….
*
ರಿಂಗಣಿಸುತಿದ್ದ ಮೊಬೈಲ್ ಎತ್ತಿ ಕಿವಿಗಾನಿಸಿದ…. “ರೀ … ಅಮ್ಮ ಯಾಕೋ ಮೂರ್ ದಿನದಿಂದ ಹುಷಾರಿಲ್ಲ ಅಂತಿದ್ರು… ಜ್ವರ, ಕೆಮ್ಮು, ಈಗೀಗ ಉಸಿರಾಡೋಕು ಕಷ್ಟ ಪಡ್ತಾ ಇದಾರೆ…. ನಂಗ್ಯಾಕೋ ಭಯ ಆಗ್ತಾ ಇದೆ… ನೀವು ಬೇಗ ಬನ್ನಿ…… ಅಮ್ಮಾ ಏನಾಗ್ತಿದೆ… ಅಮ್ಮಾ………….
" ಅಹಲ್ಯ... ಅಹಲ್ಯಾ...........
*****
ಹರೀಶ್ ಕಾಂಚನ್
ಮುದ್ದುರಾಧ