ಬೈಂದೂರು (ಮೇ, 6): ಬೈಂದೂರು ಸರ್ಕಾರಿ ಆಸ್ಪತ್ರೆಗೆ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಆಸ್ಪತ್ರೆಗೆ ಮಂಜೂರರಾಗಿರುವ ಹೊಸ ಆಮ್ಲಜನಕ ಉತ್ಪಾದನಾ ಘಟಕದ ಸ್ಥಳಪರಿಶೀಲನೆ ನಡೆಸಿದರು. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು, ಪ್ರತಿನಿತ್ಯ 80 ಸಿಲಿಂಡರ್ ನಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಅವರು ಹೇಳಿದರು. ಹಾಗೆಯೇ ಶಾಸಕರು ಕೋವಿಡ್ ನಿರ್ವಹಣೆ ಬಗ್ಗೆ ವೈದ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿಗಳೊಡನೆ ಚರ್ಚಿಸಿ ಮುಂದೆ ಆಗಬೇಕಾದ ಅಗತ್ಯಕ್ರಮಗಳು ಹಾಗೂ ಸಿಬ್ಬಂದಿ ವರ್ಗದ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ ಈಗಾಗಲೇ ಮಿಸಲಿಟ್ಟಿರುವ ಆಮ್ಲಜನಕ ಸಿಲಿಂಡರ್ ಗಳ ಬಗ್ಗೆ ವಿವರಣೆ ಪಡೆದರು.
ಶಾಸಕರು ಸುದ್ಧಿಗಾರೊಂದಿಗೆ ಮಾತನಾಡಿ ಈಗಾಗಲೇ ನಾನು ಹಾಗೂ ಸಂಸದರಾದ ಬಿ ವೈ ರಾಘವೇಂದ್ರ ಮಾತನಾಡಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ದಿನಕ್ಕೆ 80 ಆಮ್ಲಜನಕ ಸಿಲಿಂಡರ್ ಉತ್ಪಾದನಾ ಸಾಮರ್ಥ್ಯ ವಿರುವ ಆಮ್ಲಜನಕ ಘಟಕವನ್ನು ಮಂಜೂರು ಮಾಡಿಸಿದ್ದು, ಇನ್ನು 1ತಿಂಗಳ ಒಳಗೆ ಆಮ್ಲಜನಕ ಘಟಕ ಕಾರ್ಯರಂಭಗೊಳ್ಳಲಿದ್ದು ಅಲ್ಲಿಯವರೆಗೆ ನನ್ನ ಕ್ಷೇತ್ರದಲ್ಲಿ ಕೋವಿಡ್ ಸಂತ್ರಸ್ತರಿಗೆ ಯಾವುದೇ ವೈದ್ಯಕೀಯ ಕೊರತೆಯಾಗದಂತೆ ಮಾನ್ಯ ಜಿಲ್ಲಾ ಅರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಭಟ್ವಾಡಿ, ಆಸ್ಪತ್ರೆಯ ವೈದ್ಯರಾದ ಡಾ|ನಂದಿನಿ, ಡಾ|ಮಹೇಂದ್ರ ಶೆಟ್ಟಿ, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ರಾದ ಆನಂದ್ ಖಾರ್ವಿ, ಸುಧಾಕರ ಶೆಟ್ಟಿ ನೆಲ್ಯಾಡಿ,ಪ್ರಸನ್ನ ಉಪ್ಪುಂದ ಸ್ಥಳೀಯ ಪ್ರಮುಖರು ಆರೋಗ್ಯ ಅಧಿಕಾರಿಗಳು ಸಿಬ್ಬಂದಿವರ್ಗದವರು ಹಾಗೂ ಮತ್ತಿತರು ಹಾಜರಿದ್ದರು.