ಇನ್ನೂ ಅರ್ಧಗಂಟೆ ಅಂದಿದ್ದರೆ ಆದಷ್ಟು ದೋಣಿಗಳು ಹೇಳಹೆಸರಿಲ್ಲದಂತೆ ಸಮುದ್ರದ ಒಡಲು ಸೇರುತ್ತಿದ್ದವು. “ತೀರ” ಅನ್ನುವಂತಿದ್ದ ಕಡಲ ದಂಡೆ ರಕ್ಕಸ ಅಲೆಗಳಿಗೆ ರಕ್ಷಣೆಯಿಲ್ಲದೆ ತಾವಾಗೇ ಸೋಲನ್ನಪ್ಪಿದ್ದವು. ಕೊರೆತಕ್ಕೆ ಸವೆಯುತ್ತಿದ್ದ ಮರಳನ್ನು ಹಿಡಿದಿಡಲಾಗದೆ ಕರಾವಳಿಗುಂಟ ಮರಗಿಡಗಳು ನೀರುಪಾಲಾದವು. ಕೋಟಾದ ಮಣೂರು ಪಡುಕರೆಯಲ್ಲಿ ಕಂಡುಬಂದ ದೃಶ್ಯಗಳಿವು. ಕರಾವಳಿಯುದ್ದಕ್ಕೂ ಇಂದು ಇದೇ ಗೋಳು.
" ತೌಕ್ತೆ" ಚಂಡಮಾರುತದ ಪ್ರಭಾವ ಅಕ್ಷರಶಃ ಕರಾವಳಿಯನ್ನು ಅದರಲ್ಲೂ ಕಡಲಂಚಿನ ಮೀನುಗಾರರನ್ನು ನಿದ್ದೆಗೆಡಿಸಿದೆ. ದಡದಲ್ಲಿ ಲಂಗರು ಹಾಕಿದ್ದ ದೋಣಿಗಳೆಲ್ಲಾ ಇನ್ನೇನು ಸಮುದ್ರ ಪಾಲಾಗುವುದರಲ್ಲಿ ಎಚ್ಚೆತ್ತ ಮೀನುಗಾರರು ತಾತ್ಕಾಲಿಕವಾಗಿ ಅವುಗಳನ್ನು ಸ್ಥಳಾಂತರಿಸಿದರು. ಅವಷ್ಟೂ ದೋಣಿಗಳಿಗ ರಸ್ತೆ ದಾಟಿ ಮನೆಬಾಗಿಲಲ್ಲಿ ನೆಲೆ ಕಂಡಿದೆ. ಮನೆ ಮತ್ತು ಕಡಲಿಗೆ ಈಗ ಅದೊಂದು ರಸ್ತೆ ಮಾತ್ರ ಅಂತರ. ರಸ್ತೆಗೂ ಕಾಲ ಒಂದೇ ದಿನ ಅಂತನಿಸಿದೆ ಹೀಗೆ ಮುಂದುವರಿದರೆ. ನಿದ್ದೆ ಹೇಗೆ ಬಂದೀತು?
ಕೃಷಿ ಪ್ರಾಧಾನ್ಯತೆ ಹೊಂದಿರುವ ದೇಶದಲ್ಲಿ ಮೀನುಗಾರಿಕೆ ಕೂಡ ಪ್ರಾಥಮಿಕ ವಲಯದಲ್ಲೇ ಇದೆ ಅನ್ನುವುದು ಸಂಬಂಧಪಟ್ಟ ಅಧಿಕಾರಿಗಳಿಗೆ, ಸರ್ಕಾರಕ್ಕೆ ಅರಿವಿನಲ್ಲಿ ಇರುವುದೊ? ಇಲ್ಲವೋ? ಗೊತ್ತಿಲ್ಲ.. ಮೀನುಗಾರರ, ಮೀನುಗಾರಿಕೆಯ ಹಾಗೂ ಕರಾವಳಿಯ ತಾಪತ್ರಯಗಳು ಕೃಷಿ ಯಷ್ಟು ಸದ್ದು ಮಾಡುವುದೇ ಇಲ್ಲ. ಇಲ್ಲಿನ ಜನ ಸಾವಲಂಬಿಗಳು ನೋಡಿ ಏನ್ ಮಾಡಿಲ್ಲ ಅಂದ್ರೂ ನಡೆಯುತ್ತೆ ಅನ್ನೋ ತಿರಸ್ಕಾರ.
ತಾತ್ಕಾಲಿಕವಾಗಿ ನಿರ್ಮಿಸಲ್ಪಟ್ಟ ತಡೆಗೋಡೆಗಳು ವರ್ಷವರ್ಷಕ್ಕೂ ನೀರು ಪಾಲಾಗುತ್ತಿರುವುದು ಸಮರ್ಪಕವಾದ ಯೋಜನೆ ಹಾಗೂ ನಿರ್ವಹಣೆ ಇಲ್ಲದೆ ಇರುವುದೇ ಕಾರಣ. ಇದು ಮೊದಲಲ್ಲ ಕೊನೆಯೂ ಅಲ್ಲ; ಇನ್ನಷ್ಟು ಮನೆಗಳು ಮರಗಳು ಅಥವಾ ಬದುಕೇ ನೀರುಪಾಲಾದರೂ ಅವರು (ಸರ್ಕಾರ) ಏಳಲ್ಲ; ತಲೆ ಕೆಡಿಸಿಕೊಳ್ಳಲ್ಲ. ಕಣ್ಣೊರೆಸುವ ನಾಟಕ ನಿರಂತರ.. ಬದುಕು ಕೊಟ್ಟ ಕಡಲಿಗೆ ನಮ್ಮೀ ಬದುಕು.
ಹರೀಶ್ ಕಾಂಚನ್, ಮುದ್ದುರಾಧ