ಉಡುಪಿ (ಜೂ, 06) : ಕಾಡೂರು ಗ್ರಾಮದ ಮುಂಡಾಡಿ ಬಡಾಬೆಟ್ಟು ನಿವಾಸಿ ಚಂದ್ರಾವತಿ ಶೆಟ್ಟಿ ಯವರ ಮಗಳು 10 ವರ್ಷ ಪ್ರಾಯದ ಬಾಲಕಿ ಯುಕ್ತಿ ಶೆಟ್ಟಿ ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದು, ಖಾಯಿಲೆಯ ಅರಿವೂ ಇಲ್ಲದ ಈ ಮಗುವಿನ ನೆರವಿಗಾಗಿ ಕೊಕ್ಕರ್ಣೆ – ಕಾಡೂರು ಸ್ಥಳೀಯ ಪರಿಸರದ ಸಂತೋಷ್ ಶೆಟ್ಟಿ ಮುಂಡಾಡಿ ಅವರ ನೇತೃತ್ವದಲ್ಲಿ ಹಾಗೂ ಅವರ ಆಪ್ತ ಸ್ನೇಹಿತ ವರ್ಗದವರಾದ ಅಶೋಕ್ ಕುಂದರ್ ಮಂದಾರ್ತಿ, ವಸಂತ್ ಕುಮಾರ್ ನುಕ್ಕೂರು, ಗುರುದತ್ತ ಅಡಿಗ ಪಾದೇಮಠ, ಆದರ್ಶ ಹೆಗ್ಡೆ ಕಾಡೂರು, ಪ್ರವೀಣ್ ಮಂದಾರ್ತಿ ಹಾಗೂ ರವಿ ಮರಕಾಲ ಕಾಡೂರು ಇವರುಗಳು ಒಂದು ತಂಡವಾಗಿ ಮಗುವಿನ ಬಾಳು ಹಸನುಗೊಳಿಸುವ ಸಂಕಲ್ಪದೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಮತ್ತು ಪ್ರತಿಷ್ಠಿತ ಸಂಘ-ಸಂಸ್ಥೆಗಳು, ತಮ್ಮ ಆಪ್ತ ವಲಯದ ಸ್ನೇಹಿತರು, ವಿದೇಶದಲ್ಲಿರುವ ಉದ್ಯಮಿಗಳು, ಉದ್ಯೋಗಿಗಳು ಹಾಗೂ ಊರ- ಪರವೂರ ಅನೇಕ ಗಣ್ಯರ ನೆರವನ್ನು ಪಡೆದು ಖಾಯಿಲೆಯ ಚಿಕಿತ್ಸಾ ವೆಚ್ಚಕ್ಕೂ ಮಿಕ್ಕಿ ಸುಮಾರು 11,68,800.00 (ಹನ್ನೊಂದು ಲಕ್ಷದ ಅರವತ್ತೆಂಟು ಸಾವಿರದ ಎಂಟುನೂರು) ರೂಪಾಯಿಗಳು ಈತನಕ ಸಂಗ್ರಹಿಸಿದೆ.
ಈ ಸದ್ರಿ ಮೊತ್ತವನ್ನು ಊರಿನ ಗಣ್ಯರಾದ, ಶ್ರೀ ಬಾಲಕೃಷ್ಣ ಹೆಗ್ಡೆ, ಶ್ರೀ ಸುರೇಶ್ ಶೆಟ್ಟಿ ಕಾಡೂರು, ಶ್ರೀ ವಿಶ್ವನಾಥ್ ಶೆಟ್ಟಿ ಅಧ್ಯಾಪಕರು ಮುಂಡಾಡಿ- ಕಾಡೂರು ಹಾಗೂ ಶ್ರೀ ಸತ್ಯನಾರಾಯಣ ಶೆಟ್ಟಿ ತಂತ್ರಾಡಿ ಕಾಡೂರು ಇವರುಗಳ ಉಪಸ್ಥಿತಿಯಲ್ಲಿ ಬಾಲಕಿಯ ಚಿಕಿತ್ಸಾ ವೆಚ್ಚದ ಸಲುವಾಗಿ ಪೋಷಕರಿಗೆ ಹಸ್ತಾಂತರಿಸಿದರು.
ಒಂದಷ್ಟು ಹೃದಯ ಶ್ರೀಮಂತಿಕೆಯ ಉದ್ಯಮಿಗಳು, ಊರ-ಪರವೂರ ದಾನಿಗಳನ್ನು ಸಂಪರ್ಕಿಸಿ ದೊಡ್ಡ ಮೊತ್ತವನ್ನು ಸಂಗ್ರಹಿಸಿ ಸಾಕಷ್ಟು ಅಶಕ್ತರಿಗೆ, ಅನಾರೋಗ್ಯ ಪೀಡತರಿಗೆ ನೀಡುತ್ತಿರುವುದು ಶ್ಲಾಘನೀಯ.
“ಹನಿ ಹನಿ ಸೇರಿ ಹಳ್ಳ, ತೆನೆ ತೆನೆ ಸೇರಿ ಬಳ್ಳ” ಎನ್ನುವ ಗಾದೆಮಾತನ್ನು ಮನದಲ್ಲಿಟ್ಟುಕೊಂಡ ಈ ತಂಡವು ಸಾಮಾಜಿಕ ಕಳಕಳಿಯೊಂದಿಗೆ ಈಗಾಗಲೇ ಅನೇಕ ದಾನಿಗಳ ನೆರವಿನಿಂದ ಅನೇಕ ಸಮಾಜ ಸೇವೆಗಳನ್ನು ಮಾಡಿರುತ್ತಾರೆ.
ಭವಿಷ್ಯದ ಕನಸ್ಸನ್ನು ಹೊತ್ತು ಬದುಕು ಸವೆಸುತ್ತಿರುವ ಬಾಲಕಿ ಯುಕ್ತಿ ಯು ಅತೀ ಶೀಘ್ರವಾಗಿ ಅರೋಗ್ಯವಂತಳಾಗಲಿ ಎಂದು ಹಾರೈಸಿ, ಸಾಮಾಜಿಕ ಕಳಕಳಿಯನ್ನು ಹೊಂದಿದ ಸಮಾನ ಮನಸ್ಕರು ಈ ತಂಡದೊಂದಿಗೆ ಕೈಜೋಡಿಸಿ, ಸಹಾಯಹಸ್ತವನ್ನು ಹಾರೈಕೆ- ಆಶೀರ್ವಾದದೊಂದಿಗೆ ನೀಡಿರುವ ಪ್ರತಿಷ್ಠಿತ ಸಂಘ-ಸಂಸ್ಥೆಗಳು , ಸ್ಥಳೀಯ ದಾನಿಗಳು, ವಿದೇಶಿ ಉದ್ಯಮಿಗಳು ಹಾಗೂ ಊರ-ಪರವೂರ ದಾನಿಗಳಿಗೆ ಯುಕ್ತಿಯ ತಂದೆ-ತಾಯಿ ಹಾಗೂ ಮನೆಯವರು ಹಾಗೂ ತಂಡದ ಎಲ್ಲಾ ಸದಸ್ಯರು ಸದಾ ಚಿರ ಋಣಿಯಾಗಿ ಕೃತಜ್ಞತಾಪೂರ್ವಕ ನಮನಗಳನ್ನು ಅರ್ಪಿಸಿದ್ದಾರೆ.
ಸಹೃದಯಿ ಎಲ್ಲ ದಾನಿಗಳಿಂದ ಕ್ರೋಢೀಕರಿಸಿದ ಮೊತ್ತವು ನಿರೀಕ್ಷೆಗೂ ಮೀರಿ ಬಂದಿರುವುದರಿಂದ ಇನ್ನು ಮುಂದೆ ತಮ್ಮೆಲ್ಲರ ಶುಭಾಶೀರ್ವಾದ- ಹಾರೈಕೆ ಒಂದೇ ಸಾಕು ಎಂದು ಬಾಲಕಿಯ ಚಿಕಿತ್ಸೆಗೆ ಸಹಾಯ ಧನ ಸಂಗ್ರಹಿಸಿ ತಂಡವು ತಿಳಿಸಿರುತ್ತದೆ.












