ಕುಂದಾಪುರ (ಸೆ,16): ರಾಷ್ಟ್ರೀಯ ಶಿಕ್ಷಣ ನೀತಿ 2021 – 22 ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ಇದರಲ್ಲಿನ ಪ್ರತಿ ಅಂಶವನ್ನೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಆಸಕ್ತಿ-ಕೌಶಲ್ಯ ಆಧಾರಿತ ಕಲಿಕೆ ಹಾಗೂ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ನಿಜಾರ್ಥದಲ್ಲಿ ಆಗಲಿದೆ ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಕರುಣಾಕರ ಕೊಟೇಗಾರ್ ಹೇಳಿದರು.
ಅವರು ಗುರುವಾರ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿಆಂತರಿಕ ಗುಣಮಟ್ಟ ಭರವಸೆಯ ಕೋಶ ಆಯೋಜಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವ್ಯವಸ್ಥೆ ಸರಿಯಿದ್ದಲ್ಲಿ ದೇಶ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಎಳು ದಶಕಗಳ ಹಳೆಯದಾದ ಪಾಶ್ಚಾತ್ಯರ ಪಳೆಯುಳಿಕೆಯಂತಿರುವ ಶಿಕ್ಷಣ ನೀತಿಯು ಭಾರತೀಯರ ವ್ಯಕ್ತಿತ್ವನ್ನು ರೂಪಿಸಲು ಸಾಧ್ಯವಿಲ್ಲ. ಹಾಗಾಗಿಯೇ ದೇಶದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದರು. ಅಂಕ ಗಳಿಸುವುದಕ್ಕಾಗಿ ಪಡೆಯುವ ಶಿಕ್ಷಣಕ್ಕೂ, ಅಂತಹ ಶಿಕ್ಷಣದ ಹೊರತಾಗಿ ಪಡೆಯುವ ಕೌಶಲ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳನ್ನು ಅಂಕಗಳಿಸುವ ಸರಕನ್ನಾಗಿ ರೂಪಿಸಲಾಗುತ್ತಿದೆ. ವಿದ್ಯಾವಂತರಾಗುತ್ತಲೇ ಜೀವನ ಕೌಶಲ್ಯ ಕಲಿಸುವುದು ಅತಿ ಮುಖ್ಯವಾಗಿದ್ದು, ಬಾಲ್ಯದಿಂದಲ್ಲೇ ವಿದ್ಯಾರ್ಥಿಯ ಆಸ್ತಕಿಯನ್ನು ಹಾಗೂ ಕಡ್ಡಾಯವಾಗಿ ಕಲಿಯಬೇಕಾದ ಅಂಶವನ್ನು ಗುರುತಿಸಿ ಕಲಿಸುವ ವ್ಯವಸ್ಥೆ ನೂತನ ಶಿಕ್ಷಣ ನೀತಿಯಲ್ಲಿ ಇರಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಪ್ರಭಾ ಅಕಾಡೆಮಿಯ ಮುಖ್ಯಸ್ಥರಾದ ಭರತ್ ಶೆಟ್ಟಿಉಪಸ್ಥಿತರಿದ್ದರು. ಡಾ.ಕರುಣಾಕರ ಕೋಟೆಗಾರ್ ಹಾಗೂ ಭರತ್ ಶೆಟ್ಟಿಯವರನ್ನು ಗೌರವಿಸಲಾಯಿತು.
ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಂಯೋಜಕಿ ಅವಿತಾ ಕೊರೆಯಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಸುಧಾಕರ ಪಾರಂಪಳ್ಳಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿದರು. ಉಪನ್ಯಾಸಕಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.