ಉಡುಪಿ (ಸೆ,20): ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ನವೀನ್ ಹೆಗ್ಡೆ, ಹರ್ಷವರ್ಧನ ಎನ್. ಸೌರವ್ .ಕೆ ,ಮಹಮ್ಮದ್ ನೌಫಾಲ್ ರವರು ಅಭಿವೃದ್ಧಿ ಪಡಿಸಿದ ಮಣ್ಣಿನ ತೇವಾಂಶ ಹಾಗೂ ತೇವಾಂಶ ಹಿಡಿದಿಡುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ “ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ” ದೊರಕಿದೆ.
ಸಿವಿಲ್ ವಿಭಾಗದ ಪ್ರೊ. ಸುನಿಲ್ ಹಲ್ದಂಕರ್ ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಡಾ. ಸಚಿನ್ ಭಟ್ ರವರ ಮಾರ್ಗದರ್ಶನದಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಅತಿ ಕಡಿಮೆ ವೆಚ್ಚದಲ್ಲಿ ಮಣ್ಣಿನ ಗುಣಲಕ್ಷಣಗಳನ್ನು ಸ್ಥಳದಲ್ಲೇ ಕಂಡುಹಿಡಿಯುವ ಈ ಯಂತ್ರದಿಂದ ಪರೀಕ್ಷೆಯ ಸಮಯವನ್ನು ಉಳಿಸಬಹುದಾಗಿದೆ. ಮಾತ್ರವಲ್ಲದೇ ಈಗ ಬಳಕೆಯಲ್ಲಿರುವ ಸಾಧನಕ್ಕಿಂತ ಆಧುನಿಕ ಸೆನ್ಸರುಗಳನ್ನು ಬಳಸಿ ತಯಾರಿಸಲಾದ ಈ ಸಾಧನವು ಹಗುರವಾಗಿದ್ದು, ಈ ಸಾಧನವನ್ನು ಸುಲಭವಾಗಿ ಅನುಕೂಲಕ್ಕೆ ತಕ್ಕಂತೆ ಸಾಗಿಸಬಹುದಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.