ಮಲ್ಪೆ (ಅ, 02) : ಕರೋನಾ ಕಾಲಘಟ್ಟದ ನಡುವೆಯೂ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸ್ವಚ್ಛತಾ ಅಭಿಯಾನ, ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಕರಾವಳಿ ಭಾಗದ ಪ್ರಸಿದ್ಧ ಬ್ಯಾಂಕ್ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಚಟುವಟಿಕೆಗಳು ಅಭಿನಂದನಾರ್ಹ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ.ಶಂಕರ್ ಹೇಳಿದರು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಟೀಮ್ ನೇಷನ್ ಫಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಲ್ಪೆ ಪಡುಕೆರೆ ಶಾಂತಿನಗರ ಬೀಚ್ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ ಪ್ರಧಾನಿ ನರೇಂದ್ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯಂದು ಬೀಚ್ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿದ್ದು, ಬ್ಯಾಂಕ್ ಗಳಿಸಿದ ಲಾಭಾಂಶದ ಭಾಗದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೂರ್ಮಾ ರಾವ್, ಶಾಸಕರಾದ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಪೌರಾಯುಕ್ತರಾದ ಡಾ. ಉದಯ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕಿಣಿ ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಟೀಮ್ ನೇಷನ್ ತಂಡದ ಸುಮಾರು 200 ಮಂದಿ ಸ್ವಯಂಸೇವಕರ ತಂಡದ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಕೆ ಸುವರ್ಣ, ಕೊಡವೂರು ವಾರ್ಡ್ ನಗರಸಭೆ ಸದಸ್ಯರಾದ ವಿಜಯ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಟೀಮ್ ನೇಶನ್ ಫಸ್ಟ್ ಗೌರವಾಧ್ಯಕ್ಷರಾದ ಮೇಜರ್ ಪ್ರಕಾಶ್ ರಾವ್, ಅಧ್ಯಕ್ಷರಾದ ಸೂರಜ್ ಕಿದಿಯೂರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ದಿವಾಕರ ಖಾರ್ವಿ, ಬ್ಯಾಂಕಿನ ನಿರ್ದೇಶಕರಾದ ಎನ್. ಟಿ. ಅಮೀನ್, ಶಿವರಾಮ್ ಕುಂದರ್, ಸುರೇಶ್ ಬಿ. ಕರ್ಕೇರ, ಶ್ರೀಮತಿ ವನಜ ಪುತ್ರನ್, ಶ್ರೀಮತಿ ವನಜ ಕಿದಿಯೂರು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಜಿ. ಕೆ. ಶೀನಾ ಉಪಸ್ಥಿತರಿದ್ದರು.













