ವಂಡ್ಸೆ(ಜು,7): ಕೆರಾಡಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಕುಂದಾಪುರ-ಕೆರಾಡಿ ಸರ್ಕಾರಿ ಬಸ್ಸು ಸಂಪರ್ಕಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬಸ್ಸಿಗೆ ಪೂಜೆ ನೇರವೆರಿಸಿ ಚಾಲನೆ ನೀಡಿದರು.
ಈ ಮೂಲಕ ಗುರುವಾರದಿಂದ ಕುಂದಾಪುರ- ಕೆರಾಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಅಧೀಕೃತವಾಗಿ ಆರಂಭವಾಗಿದ್ದು ಕೆರಾಡಿ ಗ್ರಾಮದ ಜನತೆಯ ಬಹು ದಿನದ ಕನಸು ನನಸಾದಂತ್ತಾಗಿದೆ.
ನಮ್ಮ ಕ್ಷೇತ್ರದ ಕೆರಾಡಿ ಭಾಗಕ್ಕೆ ಸರ್ಕಾರಿ ಬಸ್ ಸಂಪರ್ಕ ಬೇಕು ಎಂಬುದಾಗಿ ಎ.ಬಿ.ವಿ.ಪಿಯ ನೂರಾರು ವಿದ್ಯಾರ್ಥಿಗಳು ಹಾಗು ಆ ಭಾಗದ ಪ್ರಮುಖರು ಮನವಿ ಮಾಡಿದ್ದರು. ಆ ಕುರಿತಂತೆ ನಾನು ಮೊದಲಿನಿಂದಲೂ ಆಗ್ರಹಿಸುತ್ತಲೆ ಬಂದಿದ್ದು, ಒಂದು ವಾರದೊಳಗೆ ಬಸ್ ವ್ಯವಸ್ಥೆ ಮಾಡಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಗಡುವು ನೀಡಲಾಗಿತ್ತು.
ಆ ನಿಟ್ಟಿನಲ್ಲಿ ಈಗ ಕೆರಾಡಿಯಿಂದ ಕುಂದಾಪುರಕ್ಕೆ ಸರ್ಕಾರಿ ಬಸ್ ಸಂಪರ್ಕ ಆರಂಭಗೊಂಡಿದೆ. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಿದೆ. ಇದನ್ನು ಸದುಪಯೋಗ ಪಡೆದುಕೊಂಡು ಸರ್ಕಾರಿ ಬಸ್ಸಿನಲ್ಲೆ ಪ್ರಯಾಣ ಮಾಡಿ ಎಂದು ಶಾಸಕರು ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರಾಡಿಯಂತಹ ತೀರ ಹಿಂದುಳಿದ ಗ್ರಾಮದ ಸಾಕಷ್ಟು ವಿದ್ಯಾರ್ಥಿಗಳು ಕುಂದಾಪುರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ,ಅನೇಕ ವರ್ಷಗಳಿಂದ ಸರ್ಕಾರಿ ಬಸ್ ಸೌಕರ್ಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರು. ಈ ಬಗ್ಗೆ ಹಲವು ಬಾರೀ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ,ಕ್ಷೇತ್ರದಲ್ಲಿನ ಅಗತ್ಯವಿರುವ ಗ್ರಾಮೀಣ ಭಾಗಗಳಿಗೆ ಸರ್ಕಾರಿ ಬಸ್ ಸಂಪರ್ಕ ಕಲ್ಪಿಸುವ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿತ್ತು.
ಆ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಂದಾಪುರ ಕೆ.ಎಸ್.ಆರ್.ಟಿ.ಸಿ ಡಿಪೋದ ನಾಗರಾಜ ಖಾರ್ವಿ, ಕೆರಾಡಿ ಗ್ರಾ.ಪಂ ಉಪಾಧ್ಯಕ್ಷ ಸುದರ್ಶನ್ ಶೆಟ್ಟಿ ಬೆಳ್ಳಾಲ, ಸದಸ್ಯ ರಾಘವೇಂದ್ರ ಕೊಠಾರಿ,ಚಿತ್ತೂರು ಗ್ರಾಮ ಪಂಚಾಯತ್ ಸದಸ್ಯ ರವಿ ಶೆಟ್ಟಿ ಚಿತ್ತೂರು, ಹರ್ಷ ಶೆಟ್ಟಿ, ವಿಜಯ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.