ಬೈಂದೂರು(ಡಿ,25):ಯುವಜನತೆಯಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ ಹಾಗೂ ರಾಷ್ಟ್ರ ಸೇವಾ ಮನೋಭಾವ ಹೆಚ್ಚಬೇಕು. ಕುಂದಾಪುರ ಹಾಗೂ ಬೈಂದೂರು ಭಾಗದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗುವುದ ಜೊತೆಗೆ ಸೈನ್ಯದಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ನೀಡಿ ಹಾಗೂ ತರಬೇತುಗೊಳಿಸುವುದು ಅಗತ್ಯವಾಗಿದೆ ಎಂದು ಖ್ಯಾತ ಉದ್ಯಮಿ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಅವರು ಹೇಳಿದರು.
ಅವರು ನೇಷನ್ಸ್ ಲವರ್ಸ್ ಬೈಂದೂರು ಸಂಸ್ಥೆಯ ಆಯೋಜನೆಯಲ್ಲಿ ಬೈಂದೂರಿನ ರೋಟರಿ ಭವನದಲ್ಲಿ ಡಿ,24 ರಂದು ಹಮ್ಮಿಕೊಳ್ಳಲಾದ ಭಾರತೀಯ ಸೇನಾ ಪಡೆಗಳಲ್ಲಿ ಉದ್ಯೋಗಾವಕಾಶ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಬೈಂದೂರಿನ ನೇಷನ್ಸ್ ಲವರ್ಸ್ ತಂಡ ಸೇನೆಯ ಬಗ್ಗೆ ನಿರಂತರ ತರಬೇತಿ, ಮಾಹಿತಿ ಹಾಗೂ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಮಿಳುನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ದಂಪತಿ ಸೇರಿದಂತೆ, ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಿವೃತ್ತ ಸೈನಿಕರಾದ ಚಂದ್ರಶೇಖರ ನಾವಡ ಬೈಂದೂರು, ಎಂ. ಜೈಕಿಶನ್ ಭಟ್, ನಿವೃತ್ತ ಸೈನಿಕ ಗಣಪತಿ ಖಾರ್ವಿ ಉಪ್ಪುಂದ ಸಂಪನ್ಮೂಲ ವ್ಯಕ್ತಿಗಳಾಗಿ
ಉಪಸ್ಥಿತರಿದ್ದು ಸೈನ್ಯ ಸೇರಬಯಸುವ ಯುವ ಜನತೆಗೆ ಮಾರ್ಗದರ್ಶನ ನೀಡಿದರು.