ಹೊಸಂಗಡಿ(ಸೆ.25): ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಹಾಗೂ ಸಿಇಟಿ ತರಬೇತಿ ತರಗತಿಗಳ ಉದ್ಘಾಟನಾ ಸಮಾರಂಭ ಸೆ.24ರಂದು ಜರುಗಿತು.
ಬದಲಾಗುತ್ತಿರುವ ಕಾಲಮಾನ ಹಾಗೂ ಪೋಷಕರ ಬೇಡಿಕೆಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಸದಾ ಮುನ್ನುಡಿಯನ್ನು ಬರೆಯುತ್ತಿದೆ ಎಂದು ಪ್ರಾಂಶುಪಾಲರಾದ ಶ್ರೀ ಗೋಪಾಲ್ ಭಟ್ ಪ್ರಸ್ತಾವಿಸಿದರು. ಸಿಇಟಿ ತರಬೇತಿ, ಅದರ ಅಗತ್ಯ , ಸಿಇಟಿ ಆಧಾರಿತ ಕೋರ್ಸ್ ಗಳು, ಅದರ ಪಠ್ಯಕ್ರಮ , ಪ್ರಶ್ನೆ ಪತ್ರಿಕೆ ಮಾದರಿ ಹಾಗೂ ಆ ಸಂಬಂಧಿತ ವಿಷಯಗಳ ಬಗ್ಗೆ ಜೀವಶಾಸ್ತ್ರ ಉಪನ್ಯಾಸಕರಾದ ಡಾ. ಅರುಣ್ ಕುಮಾರ್ ಶೆಟ್ಟಿ ಯವರು ಸವಿವರ ಮಾಹಿತಿ ನೀಡಿದರು.
ಈ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸಿದ್ದಾಪುರದ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಚಂದ್ರ ಕುಲಾಲ್ ನೆರವೇರಿಸಿದರು. ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆ ಇದರ ಮುಖ್ಯೋಪಾಧ್ಯಾಯರಾದ ಸುರೇಂದ್ರ ಶೆಟ್ಟಿ, ಸರಸ್ವತಿ ವಿದ್ಯಾಲಯ ಸಿದ್ದಾಪುರದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಿಯಾ, , ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಗುರುಪ್ರಸಾದ್, ಪಫೂ ಕಾಲೇಜು ಹೊಸಂಗಡಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.
ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಗೊಲ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೊಸತನದೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಸವಾಲನ್ನು ಎದುರಿಸಲು ಸಜ್ಜುಗೊಳಿಸುತ್ತಿರುವ ಹೊಸಂಗಡಿ ಕಾಲೇಜಿನ ಈ ಹೆಜ್ಜೆ ಶ್ಲಾಘನೀಯ, ಈ ಕಾಲೇಜಿಗೆ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದು ಮುಂದೆಯೂ ಕೂಡಾ ಸಹಕಾರ ನೀಡಲಿದ್ದೇವೆ ಎಂದು ಶುಭ ಹಾರೈಸಿದರು.
ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಅದರ ತಯಾರಿ ಹಾಗೂ ಪ್ರಸ್ತುತ ಉದ್ಯೋಗಾವಕಾಶಗಳು , ಓದಬೇಕಾದ ವಿಷಯಗಳು ಇವುಗಳ ಬಗ್ಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಶ್ರೀಕಾಂತ್ ಮಾಹಿತಿ ನೀಡಿದರು. ಸ.ಪ.ಪೂ ಕಾಲೇಜು ಹೊಸಂಗಡಿ ಇದರ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಉದಯ ನಾಯ್ಕ್ ಮಾತನಾಡಿ ಕಾಲೇಜಿನ ಹೊಸ ಹೊಸ ಚಿಂತನೆಗಳಿಗೆ ಕೈ ಜೋಡಿಸುವ ಕೆಲಸವನ್ನು ಹಳೆ ವಿದ್ಯಾರ್ಥಿಗಳು ಸದಾ ಮಾಡಲಿದ್ದೇವೆ ಎಂದರು.
ಆಂಗ್ಲ ಭಾಷಾ ಉಪನ್ಯಾಸಕರಾದ ಡೆನಿಸ್ ಡಿಸೋಜಾ ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕ ರಾದ ಶ್ರೀ ವೆಂಕಟೇಶ್ ವಂದಿಸಿದರು. ಇತಿಹಾಸ ಉಪನ್ಯಾಸಕರು ಹಾಗು ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ರಣಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.