ಕುಂದಾಪುರ (ಸೆ.29): ಶಿಕ್ಷಕ ವೃತ್ತಿ ಶ್ರೇಷ್ಠ ವಾದುದು, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಜೊತೆಗೆ ಶಿಕ್ಷಕ ವ್ರತ್ತಿಯಲ್ಲಿ ಇರುವ ನಾವು ಭಾಗ್ಯವಂತರು ಎಂದು ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಹೇಳಿದರು.
ಅವರು ರೋಟರಿ ಕ್ಲಬ್ ಗಂಗೊಳ್ಳಿ ಇವರ ವತಿಯಿಂದ ಕಾಲೇಜಿನ ಮೂಕಾಂಬಿಕಾ ಸಭಾoಗಣದಲ್ಲಿ ಸೆ.28 ರಂದು ಹಮ್ಮಿಕೊಂಡ ಶಿಕ್ಷಕರಿಗೆ ನೀಡಲಾಗುವ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ನಾವು ಸಾಕಷ್ಟು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದ್ದೇವೆ. ರಾಷ್ಟ್ರ ನಿರ್ಮಾಣದ ಜೊತೆಗೆ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೊವಾಡಿ ,ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇದರ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ನರೇಂದ್ರ ಎಸ್ ಗಂಗೊಳ್ಳಿ,ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿಇದರ ಶಿಕ್ಷಕರಾದ ಶ್ರೀ ಸಂದೀಪ ಕುಮಾರ್, ಕೊಂಚಾಡಿ ರಾಧಾ ಶೆಣೈ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇದರ ಶಿಕ್ಷಕಿ ಕುಮಾರಿ ಅನುಷಾ ಸಿ. ಬಂಗೇರ ಇವರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಗಂಗೊಳ್ಳಿ ಇದರ ಅಧ್ಯಕ್ಷರಾದ ರೋ, ಸುಗುಣ ಆರ್.ಕೆ.,ಝೋನಲ್ ಲೆಫ್ಟಿನೆಂಟ್. ರೋ. ಪೂರ್ಣಿಮಾ ಭವಾನಿ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಾ.ಬಿ.ಬಿ ಹೆಗ್ಡೆ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ, ರೋಟರಿ ಗಂಗೊಳ್ಳಿ ಸದಸ್ಯ ರೋ.ರಾಮನಾಥ ನಾಯಕ್ ,ರೋ. ಚಂದ್ರಕಲಾ ತಾಂಡೇಲ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ದೀಪಿಕಾ ರಾಘವೇಂದ್ರ ಪ್ರಾರ್ಥಿಸಿದರು.ರೋಟರಿ ಲಿಟರಸಿ ಚೇರ್ಮನ್ ರೋ, ದಿನಕರ ಶ್ಯಾನುಭಾಗ್ ಸ್ವಾಗತಿಸಿ ಪ್ರಾಸ್ತಾವಿಸಿದರು. ರೋಟರಿ ಕ್ಲಬ್ ಗಂಗೊಳ್ಳಿ ಇದರ ಕಾರ್ಯದರ್ಶಿಗಳಾದ ರೋ. ಚಂದ್ರಕಲಾ ತಾಂಡೇಲ ವಂದಿಸಿದರು.ಕನ್ನಡ ಉಪನ್ಯಾಸಕರಾದ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಇದರ ಸದಸ್ಯರು, ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .