ಕರಾವಳಿಗರ ಆರಾಧನಾ ಕಲೆ ಯಕ್ಷಗಾನ. ಕರ್ನಾಟಕದ ಗಂಡು ಕಲೆ ಕೂಡ ಹೌದು. ಸುಮಾರು ಒಂದು ಸಾವಿರ ವರ್ಷದಿಂದ ಕಾಲದಿಂದ ಕಾಲಕ್ಕೆ ಹಲವಷ್ಟು ಬದಲಾವಣೆ ಆಗುತ್ತಲೇ ಸಾಗಿ ಬಂದಿದೆ. ಆರಂಭದಲ್ಲಿ ಪೌರಾಣಿಕ ಕಥೆಗಳ ಯಕ್ಷಗಾನ, ದಶಕಗಳು ಉರುಳಿದಂತೆ ಸಾಮಾಜಿಕ ಕಥೆಗಳು, ಆ ನಂತರ ಕಾಲ್ಪನಿಕ ಕಥೆಗಳು ಕೂಡ ರಂಗಸ್ಥಳದಲ್ಲಿ ಪ್ರದರ್ಶನ ಕಂಡವು. ಇವೆಲ್ಲವನ್ನೂ ಕಾಲಘಟ್ಟದ ಬದಲಾವಣೆಗಳಂತೆ ವಿಭಾಗಿಸಬಹುದು. ಆದರೆ ಇತ್ತೀಚಿನ ಯಕ್ಷಗಾನವನ್ನು ಬಹು ಮುಖ್ಯವಾಗಿ ಎರಡು ವಿಭಾಗ ಮಾಡಬಹುದು. ಕರೋನ ಪೂರ್ವ ಯಕ್ಷಗಾನ ಮತ್ತು ಕರೋನೋತ್ತರ ಯಕ್ಷಗಾನ.
ಕರೋನ ಬಂದ ನಂತರ ಯಕ್ಷಗಾನದಲ್ಲಿ ಹಲವಷ್ಟು ಬದಲಾವಣೆ ಆಗಿದೆ. ಯಕ್ಷಗಾನವೆಂದರೆ ರಾತ್ರಿಗೆ ಆರಂಭ ಎನ್ನುತ್ತಿದ್ದ ಹರಕೆ ಮೇಳಗಳು ಕೂಡ ಮಧ್ಯಾಹ್ನವೇ ಯಕ್ಷಗಾನ ಶುರು ಮಾಡುವ ಸಂದರ್ಭ ಬಂದಿದೆ. ಪ್ರೇಕ್ಷಕರು ಇಲ್ಲದೇ ಆಟ ಮಾಡಲೇಬೇಕಾದ ಅನಿವಾರ್ಯ ಬಂದಾಗ ಫೇಸ್ಬುಕ್ ಮತ್ತು ಯುಟ್ಯೂಬ್ ಲೈವ್ ಮೂಲಕ ಯಕ್ಷಗಾನ ಆಗಿದೆ. ಲೈವ್ ಕೊಟ್ಟು ಆನ್ಲೈನ್ ಪ್ರೇಕ್ಷಕರಿಗೆ ಯಕ್ಷಗಾನ ಉಣಬಡಿಸುವ ಕಾರ್ಯವೂ ಆಗಿದೆ. ಒಮ್ಮೆ ಮೇಳ ಹೊರಟ ಮೇಲೆ ಮೇ ತನಕ ನಿರಂತರ ಆಟ ಆಗುವ ಸಂಪ್ರದಾಯ ಅರ್ಧಕ್ಕೆ ನಿಂತಿತು. ಒಂದು ದಿನವೂ ಆಟ ಇಲ್ಲದೆ ಇರುತ್ತಿದ್ದ ಮೇಳಗಳು, ಗಣಪತಿ ಪೂಜೆ ಅಷ್ಟೇ ಮಾಡಿ ಆಟ ನಿಲ್ಲಿಸಬೇಕಾಯ್ತು. 10 ಜನರಷ್ಟೇ ಸೇರಿ ಮುಕ್ತಾಯದ ಯಕ್ಷಗಾನ ಸೇವೆ ಮಾಡಬೇಕಾಯ್ತು.
ಕರೋನ ಕಾಲದಿಂದ ಅನೇಕ ಕಲಾವಿದರಿಗೆ ಸಂಕಷ್ಟ ಆಗಿತ್ತು. ಆದರೂ ಕರೋನದಿಂದ ಯಕ್ಷಗಾನಕ್ಕೆ ಆದ ಧನಾತ್ಮಕ ಅಂಶವೆಂದರೆ ಪ್ರೇಕ್ಷಕ ವರ್ಗದ ಸಂಚಲನ. ಆಟ ಶುರುವಾಗುತಿದ್ದ ಆರು ಗಂಟೆಗೆ ಪ್ರೇಕ್ಷಕ ವರ್ಗದ ತುಂಬು ಉಪಸ್ಥಿತಿ ಇರುತಿತ್ತು ಅಂದರೆ ನಾನು ಕಂಡ ಎಲ್ಲಾ ಆಟದಲ್ಲೂ ಕನಿಷ್ಟ 800 ಪ್ರೇಕ್ಷಕರು ಇದ್ದಿದ್ದರು. ಸುಮಾರು 12 ಗಂಟೆಯ ಆಟ ಮುಗಿಯುವ ತನಕ ಅಷ್ಟೇ ಸಂಖ್ಯೆಯ ಪ್ರೇಕ್ಷಕರು ಇರುತ್ತಿದ್ದರು. ಸ್ಥೂಲವಾಗಿ ಆಲೋಚಿಸಿ ನೋಡಿದರೆ, ಅವರು ಯಾರೂ ಕೂಡ ಹೊಸ ಪ್ರೇಕ್ಷಕರು ಆಗಿರಲಿಲ್ಲ. ಎಲ್ಲರೂ ಆಟದ ಆಸಕ್ತರು ಮತ್ತು ಹಿಂದೆ ಆಟ ನೋಡಿದವರೇ ಆಗಿದ್ದಾರೆ. ಆದರೂ ಮತ್ತೆ ಯಕ್ಷಗಾನಕ್ಕೆ ಆಕರ್ಷಣೆ ಹೊಂದಲು ಅಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಆಕರ್ಷಿತರಾಗಲು ಪ್ರಧಾನ ಕಾರಣ ರಾತ್ರಿ ನಿದ್ರೆಯ ಸಮಸ್ಯೆ ಇಲ್ಲ ಎಂಬುದು.
ಈ ವರ್ಷದ ನವೆಂಬರ್ ಸಂಕ್ರಮಣ ಮುಗಿಯುತ್ತಿದ್ದಂತೆ ಯಕ್ಷಗಾನ ಕಲೆ ಗೆಜ್ಜೆ ಕಟ್ಟಿಕೊಳ್ಳುತ್ತದೆ. ಮೇ ಕೊನೆಯ ತನಕ ವ್ಯಾವಸಾಯಿಕ ಮೇಳಗಳು ತಿರುಗಾಟ ಮುಂದುವರಿಸುತ್ತವೆ. ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಯಕ್ಷಗಾನವು ಬದಲಾವಣೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಬದಲಾವಣೆಯಾ ರೂಪ ಎಂಬಂತೆ ಈಗಾಗಲೇ ಕೆಲವು ಮೇಳಗಳು ಕಾಲಮಿತಿ ಯಕ್ಷಗಾನಕ್ಕೆ ಮಾರುಹೋಗಿವೆ. ಹಾಗೆಯೇ ಎಲ್ಲಾ ಮೇಳಗಳು ಕೂಡ ಕಾಲಮಿತಿಗೆ ಒಳಪಡುವುದು ಪ್ರಸಕ್ತ ಜಗತ್ತಿಗೆ ಹೆಚ್ಚು ಒಳಿತು. ಸಂಜೆ 7 ರಿಂದ ಆರಂಭಿಸಿ ರಾತ್ರಿ 2ರ ತನಕ ಆಟ ಮಾಡಬಹುದು. ಹೀಗೆ ಬರೋಬ್ಬರಿ 7 ಗಂಟೆ ಆಟ ಮಾಡಿದರೆ ಪ್ರಸಂಗಕ್ಕೂ ಕತ್ತರಿ ಬೀಳುವುದಿಲ್ಲ. ಕನಿಷ್ಠ 5 ಗಂಟೆ ಆಟ ಮಾಡಿದರೂ 2 ಪ್ರಸಂಗ ಪ್ರದರ್ಶನಕ್ಕೆ ಧಾರಾಳ ಸಾಕು. ನಾಳೆ ಎಂತದ್ದೇ ಕೆಲಸ ಇದ್ದರು ಕೂಡ ಪ್ರೇಕ್ಷಕರು ಹಾಜರಿ ಇರುತ್ತಾರೆ. ಯಾಕೆಂದರೆ ನಿದ್ರೆ ಭಂಗ ಇಲ್ಲ. ಸದ್ಯ ಎಲ್ಲರ ಮನೆಯಲ್ಲೂ ಕನಿಷ್ಟ 12/1 ಗಂಟೆಯ ತನಕ ಎಚ್ಚರ ಇರುತ್ತಾರೆ!
ಬೆಳಕಿನ ಸೇವೆ ಇಡೀ ರಾತ್ರಿ ಬೇಕು ಎಂಬ ಕೆಲವರ ವಾದವು ಅಲ್ಲಗೆಳೆಯುವಂತಿಲ್ಲ. ಆದರೆ ಆಗಿನ ಕರಾವಳಿಯ ಕೃಷಿಕರಿಗೆ ಯಕ್ಷಗಾನ ಒಂದೇ ಮನೋರಂಜನೆ ಆಗಿತ್ತು. ಆಟ ನೋಡಿ ಮರುದಿನ ನಿದ್ರೆ ಬಿಡುವಷ್ಟು ಪುರಸೊತ್ತು ಕೂಡ ಇದ್ದಿತ್ತು. ಆದರೆ ಈಗಿನ ಓಡುವ ಜಗತ್ತಿನ ಪ್ರೇಕ್ಷಕ ಪ್ರಭುಗಳಿಗೆ ಇಡೀ ರಾತ್ರಿ ನಿದ್ರೆ ಬಿಡೊದು ಕಷ್ಟ. ಕಾಲಮಿತಿ ಆದರೆ ಕಲಾವಿದರಿಗೆ ಕತ್ತರಿ ಎಂಬ ಮಾತು ಕೂಡ ಸುಳ್ಳು. ಹರಕೆ ಮೇಳಗಳ ಆಟದ ವೀಳ್ಯದಲ್ಲಿ ಯಾವ ಕಡಿಮೆಯೂ ಇಲ್ಲ. ಹಾಗಾಗಿ ಎಲ್ಲ ಕಲಾವಿದರನ್ನು ಉಳಿಸಿಕೊಂಡೇ ಕಾಲಮಿತಿ ಆಗಲಿ. ಇನ್ನು ಡೇರೆಮೇಳಗಳು ಇಡೀ ರಾತ್ರಿ ಆಟಕ್ಕೆ ಈ ವರ್ಷ ಸಂಘಟಕರ ಕೊರತೆ ಅನುಭವಿಸುವ ಸಾಧ್ಯತೆ ಇದೆ. ಇನ್ನು ಕೆಲವರ ವಾದ ಎಂದರೆ ಆಟ ಮುಗಿದು ಮಧ್ಯ ರಾತ್ರಿ ಹೋಗುವುದು ಎಲ್ಲಿಗೆ ಎಂಬುದು. ಈಗಾಗಲೇ ಕಳೆದ 5 ವರ್ಷಗಳಿಂದ ಕಂಡಂತೆ ಈಗ ಎಲ್ಲರಲ್ಲೂ ವಾಹನ ಇದೆ. ಆಗಿನಂತೆ ಚಂಡೆ ಸದ್ದು ಕೇಳಿಕೊಂಡೇ ಕಿಲೋಮೀಟರ್ ದೂರ ಆಟಕ್ಕೆ ಹೋಗುವ ಪ್ರೇಕ್ಷಕ ವರ್ಗ ಇಲ್ಲ. ಇದ್ದರೂ ಅವರಲ್ಲಿ ವಾಹನ ಇದೆ.
ಯಕ್ಷಗಾನ ಕಲಾವಿದರಿಗೆ ಈ ತನಕ ಒಂದು ತೊಡಕು ಇತ್ತು. ಯಕ್ಷಗಾನವನ್ನೇ ಅವಲಂಬಿಸಬೇಕಿತ್ತು ಮತ್ತು ಯಕ್ಷಗಾನ ಕೇವಲ 6 ತಿಂಗಳಿಗೆ ಮಾತ್ರ ಸೀಮಿತ ವಾಗಿತ್ತು. ಈ ರೀತಿ ಕಾಲಮಿತಿಗೆ ಒಳಪಟ್ಟರೆ ಯಕ್ಷಗಾನ ಜೊತೆಗೆ ಉಪ ವೃತ್ತಿ ಕೂಡ ಅನಾಯಾಸವಾಗಿ ಮಾಡಬಹುದು. ಅದಲ್ಲದೆ ಹಗಲು ನಿದ್ರಿಸಿ ರಾತ್ರಿ ದುಡಿಯುವ ಯಕ್ಷಗಾನ ಕಲಾವಿದರ ಬದುಕು ಪ್ರಕೃತಿಗೆ ವಿರುದ್ಧವಾದುದು. ವೈಜ್ಞಾನಿಕವಾಗಿ ಇದು ಆರೋಗ್ಯಕ್ಕೂ ಹಾನಿಕರ. ಹಾಗಾಗಿ ಕಾಲಮಿತಿಗೆ ಒಳಪಡುವುದು ಯಕ್ಷಗಾನ ಕಲಾವಿದರ ಆರೋಗ್ಯದ ದೃಷ್ಟಿಯಿಂದಲೂ ಕ್ಷೇಮ.
ಈಗಾಗಲೇ ಇಡೀ ರಾತ್ರಿ ಯಕ್ಷಗಾನ ಆಡುತ್ತಿರುವ ಮೇಳಗಳಲ್ಲಿ ರಾತ್ರಿ 12ರ ನಂತರ ಪ್ರೇಕ್ಷಕರು ಇಲ್ಲ. ಚಾ ಚಟ್ಟಂಬಡಿ ಬರುತ್ತಲೇ ಜಾಗ ಖಾಲಿ ಮಾಡುತ್ತಾರೆ. ಪ್ರೇಕ್ಷಕರಿಲ್ಲದೆ ಆಟ ಮಾಡುವುದರಿಂದ ಕಲಾವಿದರ ಬೆಳವಣಿಗೆ ಸಾಧ್ಯವೇ? ಈಗಾಗಲೇ ಕಾಲಮಿತಿ ಯಕ್ಷಗಾನ ಆಡುತ್ತಿರುವ ಧರ್ಮಸ್ಥಳ, ಹನುಮಗಿರಿ, ಪಾವಂಜೆ ಮೇಳಗಳಿಗೆ ಭರ್ತಿ ಪ್ರೇಕ್ಷಕರಿದ್ದಾರೆ. ಇದರಿಂದಲೇ ಅರ್ಥ ಆಗುತ್ತದೆ. ಆಟ ನೋಡುವವರ ಸಂಖ್ಯೆ ಅಲ್ಲಿ ಕೊರತೆ ಇಲ್ಲ. ಆಟ ನೋಡುವವರಿಗೆ ಸಮಯದ ಸಮಸ್ಯೆ ಇದೆ ಎಂದು. ಕಾಲಮಿತಿ ಯಕ್ಷಗಾನ ಎನ್ನುವುದು ಕಲಾವಿದರಿಗೂ ಹಿತ ಪ್ರೇಕ್ಷಕರಿಗೂ ಹಿತ ಆದುದರಿಂದ ಇದುವೇ ಕಾಲ ಮಿತಿಗೆ ಸಕಾಲ.
ನಾಗರಾಜ್ ಶೆಟ್ಟಿ ನೈಕಂಬ್ಳಿ, ಸಾಂಸ್ಕೃತಿಕ ಸಂಘಟಕ