ಕುಂದಾಪುರ(ಅ,10): ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರಿನ ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.
ಚಿರತೆಯು ಮಾಸ್ತಿಯವರ ಮನೆಯ ಆವರಣವಿಲ್ಲದ ಬಾವಿಗೆ ಬಿದ್ದಿದ್ದು ಸೋಮವಾರ ಬೆಳಿಗ್ಗೆ ಮನೆಯವರು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯವರು ಬೋನನ್ನು ಬಾವಿಗೆ ಇಳಿಬಿಟ್ಟು ನಾಜೂಕಾಗಿ ಕಾರ್ಯಾಚರಣೆ ನಡೆಸಿ ಅಂದಾಜು 4-5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ರಕ್ಷಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಆಲೂರು ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಜಡ್ಕಲ್ ಶಾಖೆ ಉಪ ವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್, ಅರಣ್ಯ ರಕ್ಷಕ ಆನಂದ ಬಳೆಗಾರ, ರಮೇಶ, ಮಂಜುನಾಥ ಗಾಣಿಗ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದಾರೆ.