ಕುಂದಾಪುರ(ಜು,3): ಹವಾಮಾನ ವೈಪರೀತ್ಯದಿಂದ ಭವಿಷ್ಯದ ದಿನಗಳು ಆತಂಕದಿಂದ ಕೂಡಿದ್ದು ಯುವ ಜನಾಂಗ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕು. ಗಿಡ ಹಸ್ತಾಂತರ ಸಮಾರಂಭವನ್ನು ಕೇವಲವಾಗಿ ಪರಿಗಣಿಸದೆ ಅದು ಜವಾಬ್ದಾರಿಯ ಹಸ್ತಾಂತರ ಎಂದು ಭಾವಿಸಿ, ಮುಂದಿನ ಪೀಳಿಗೆಗೆ ಹಸಿರು ಹೊನ್ನಿನ ಹೂಡಿಕೆಯಾಗಿಸಬೇಕು ಎಂದು ಮೈಸೂರು ಮರ್ಕಂಟೈಲ್ಸ್ ಕಂಪೆನಿ ಲಿಮಿಟೆಡ್ ಬೆಂಗಳೂರಿನ ಆಡಳಿತ ನಿರ್ದೇಶಕ ಶ್ರೀ ಎಚ್.ಎಸ್. ಶೆಟ್ಟಿ ಹೇಳಿದರು.
ಅವರು ಜೂನ್ 28ರ ಬುಧವಾರ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಆಚರಣೆಯ ಅಂಗವಾಗಿ ಹಸಿರು ಹೊನ್ನು ಎಂಬ ಯೋಜನೆ ಮನೆಗೊಂದು ಗಿಡ – ಯುವ ಸಮೂಹದ ಸಂಗಡ ಎಂಬ ಧ್ಯೇಯ ಪರಿಕಲ್ಪನೆಯಡಿ ಸಂಘದ ವತಿಯಿಂದ 1000 ಸಿಹಿಫಲದ ಗಿಡಗಳನ್ನು ಉಚಿತವಾಗಿ ಹಂಚಿಕೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಯುವ ಜನಾಂಗ ಹೆಚ್ಚು ಸಕ್ರಿಯವಾಗಿ ತೊಡಗಿಕೊಳ್ಳುವಂತಾಬೇಕು ಎಂಬ ಗುರಿಯನ್ನು ಇರಿಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಸರ ಪ್ರೇಮಿ ಮಥಾಯಿಸ್ ಡೇಸಾ ಮೂಡ್ಲಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಂಚಾಲಕ ಆವರ್ಸೆ ಸುಧಾಕರ್ ಶೆಟ್ಟಿ ಮಥಾಯಿಸ್ ಅವರನ್ನು ಅಭಿನಂದಿಸಿದರು. ಮಾತೃ ಸಂಘ ಮಂಗಳೂರಿನ ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ ವೃಕ್ಷಾರೂಪಣಕ್ಕೆ ಚಾಲನೆ ನೀಡಿದರು. ಬೈಂದೂರು ಬಂಟರ ಸಂಘದ ಅಧ್ಯಕ್ಷ ಎಚ್. ವಸಂತ ಹೆಗ್ಡೆ ಶುಭಶಂಷನೆಗೈದರು. ಕುಂದಾಪುರದ ಭಂಡಾಕರ್ಸ್ ಕಾಲೇಜು ಪ್ರಾಚಾರ್ಯ ಡಾ. ಎನ್.ಪಿ ನಾರಾಯಣ ಶೆಟ್ಟಿ, ಡಾ. ಬಿ ಬಿ ಹೆಗ್ಡೆ ಕಾಲೇಜು ಪ್ರಾಚಾರ್ಯ ಪ್ರೊ. ಕೆ. ಉಮೇಶ್ ಶೆಟ್ಟಿ, ಕಾಳವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಪ್ರಾಚಾರ್ಯ ಡಾ. ರಾಜೇಂದ್ರ ನಾಯಕ್, ಶ್ರೀ ಶಾರದಾ ಕಾಲೇಜು ಬಸ್ರೂರು ಪ್ರಾಚಾರ್ಯ ಡಾ.ಚಂದ್ರಾವತಿ ಶೆಟ್ಟಿ, ಯುವ ಮೆರಿಡಿಯನ್ ಆಡಳಿತ ನಿರ್ದೇಶಕ ವಿನಯ್ ಕುಮಾರ್ ಶೆಟ್ಟಿ, ಉದ್ಯಮಿ ರತ್ನಾಕರ್ ಶೆಟ್ಟಿ, ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ, ಶುಭಲಕ್ಷ್ಮಿ ಹೋಟೆಲ್ ಮಾಲಿಕ ಅಶೋಕ್ ಶೆಟ್ಟಿ ಸಂಸಾಡಿ, ಉದ್ಯಮಿ ಸದಾಶಿವ ಶೆಟ್ಟಿ ಕಾಲ್ತೋಡು, ಗೋವಾ ಆನಂದ ಸಾಗರ ಗ್ರೂಪ್ ನ ರಾಘವ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ಸಂಚಾಲಕ ಮುರಳಿಧರ ಶೆಟ್ಟಿ ಹುಯ್ಯಾರು ಉಪಸ್ಥಿತರಿದ್ದರು.
ಕುಂದಾಪುರದ ಭಂಡಾಕಾರ್ಸ್ ಕಾಲೇಜು, ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕಾಳವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ, ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನ ಘಟಕದ 1,000 ಮಂದಿ ಸ್ವಯಂಸೇವಕ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಡಾ. ಬಿ ಬಿ ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಉಪನ್ಯಾಸಕಿ ರೇಷ್ಮಾ ನಿರ್ವಹಿಸಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಪ್ರಾಸ್ತಾವಿಸಿದರು.