“ಹರಿಯಾ….. ಎಂಥ ಇವತ್ ಶಾಲಿಗ್ ಹೊಪು ಅಂದಾಜ್ ಇಲ್ದಾ?”.
” ಅಬಾ.. ಒಂದೇ ಬೀಡ್ ಬಲಿ; ಇಲ್ಲೇ ನೈಕ್ರ್ ಮನಿ ಸರ್ತ ಬಿಟ್ಟಿರ್, ಶಾಲಿಗ್ ಗಂಟಿ ಆಪುರ್ ಒಳ್ಗೆ ಬತ್ತೆ”…
ಅದೇ ಒಟ್ಟಿ ಚೆಡ್ಡಿ, ತೋಳ್ ಇಲ್ಲದ್ ಗಿಡ್ಡ್ ಬನಿಯನ್, ಕಿಸಿಯಂಗ್ ಒಂದ್ ಹಿಡಿ ಇಲ್ಲದ್ ಜರಿಕೊಟ್ಟಿ, ಕಣ್ತುಂಬ ಆಸಿ; ಮಸ್ತ್ ಮೀನ್ ಹೆಕ್ಕುಕೆ...
ಹಿಡುಕ್ ಸಿಕ್ತಾ ಅಂದೇಳಿ ಸೀರಿ ಸೆರ್ಗ್ ಹಿಂದ್ ಹುಸಿ ಇಟ್ಕಂಡ್ ಗಾಳಿ ಅಡ್ರನ್ ಹಾಂಗಾಂಗೆ ಮುರಿತಾ ಮನ್ಸಂಗೆ ಬೈಕಂತಾ ಒಳ್ಗ್ ಹೊದ್ ಅಬ್ಬಿ ಪದಾರ್ಥು ಸನ್ನಿ ಮಾಡುಕ್ ಹಿಡ್ದಳ್. ಆ ಕಷ್ಟ್ದಂಗೂ, ಅವ್ಳಿಗೋ ಅದೊಂದ್ ದೊಡ್ಡ್ ಆಸಿ ಮಕ್ಕಳ್ ಎಲ್ಲಾ ಓದ್ಕ್ ಅಂದೇಳಿ....
****
ಅದೇ ಒಟ್ಟಿ ಚೆಡ್ಡಿ, ತೋಳ್ ಇಲ್ಲದ್ ಗಿಡ್ಡ್ ಬನಿಯನ್, ಕಿಸಿಯಂಗ್ ಒಂದ್ ಹಿಡಿ ಇಲ್ಲದ್ ಜರಿಕೊಟ್ಟಿ, ಕಣ್ತುಂಬ ಆಸಿ; ಮಸ್ತ್ ಮೀನ್ ಹೆಕ್ಕುಕೆ...
ಹಿಡುಕ್ ಸಿಕ್ತಾ ಅಂದೇಳಿ ಸೀರಿ ಸೆರ್ಗ್ ಹಿಂದ್ ಹುಸಿ ಇಟ್ಕಂಡ್ ಗಾಳಿ ಅಡ್ರನ್ ಹಾಂಗಾಂಗೆ ಮುರಿತಾ ಮನ್ಸಂಗೆ ಬೈಕಂತಾ ಒಳ್ಗ್ ಹೊದ್ ಅಬ್ಬಿ ಪದಾರ್ಥು ಸನ್ನಿ ಮಾಡುಕ್ ಹಿಡ್ದಳ್. ಆ ಕಷ್ಟ್ದಂಗೂ, ಅವ್ಳಿಗೋ ಅದೊಂದ್ ದೊಡ್ಡ್ ಆಸಿ ಮಕ್ಕಳ್ ಎಲ್ಲಾ ಓದ್ಕ್ ಅಂದೇಳಿ....
****
ಎಷ್ಟ್ ಕ್ವಳಿ ಹಿಡ್ದ್ರು ಗೊತ್ತಾಯ್ದೆ ಇದ್ದ್ ಖಾಕಿ ಬಟ್ಟಿ ಚೆಡ್ಡಿ, ಕಿಸಿ ಹೊದ್ದಿಗೆ ಶಾಯ್ ಕಾರ್ಕೊಂಡ್ ಬಿಳಿ ಬಣ್ಣದ್ ಅಂಗಿ, ಬದಿಯಂಗ್ ಎರಡ್ ಲಾಡಿ ಎಳುಕೂ ಮಂಡಿ ಮುಯ್ಟ್ಕಂಬು ಬೀಣಿ ಚೀಲು, ಅದ್ರ್ ಒಳ್ಗೋ... ಇದ್ದ್ ಬದ್ದ್ ಪುಸ್ತಕ, ಚಿಪ್ಳ್ ಗೆಂಡಿ, ಒಂದಾ ? ಎರಡಾ?.. ಎಲ್ಲಾ ಸೇರ್ಸಿ, ಕೆಂಪ್ ನೀಲಿ ಬಣ್ಣದ್ ಕಂಪಾಸ್ ಪೆಟ್ಟ್ಗಿಗೆ ಜಾಗು ಮಾಡುರ್ ಒಳ್ಗೆ, ಬಣ್ಣದ್ ಬೀಣಿ ಚೀಲದ್ ಬೀಣಿಗಳ್ ಮಾತ್ ಬಿಡುಕ್ ಶುರು ಮಾಡ್ತ್ ಇದ್ದಿದೊ, ದೂರ್ ದೂರ್ ಹೋತಿದ್ದೋ, ಅಲ್ಲೇ ಚೀಲ ಒಟ್ಟಿ ಆಪುಕ್ ಶುರು ಆತಿತ್..ನಾಲ್ಕು, ಮೂರು, ಎರಡ್ ಗೆರಿ ಕೋಪಿ ಪುಸ್ತ್ಕ, 200 ಪುಟದ್ ಖಾಲಿ ಎರಡ್, ಗೆರಿ ನಾಲ್ಕ್.. ಅದ್ರ್ ಒಟ್ಟಿಗ್ ಒಂದ್ ಕಂಪಾಸ್, ಒಳಗೆ ಒಂದ್ ರೆನಾಲ್ಡ್ಸ್, ಕೋನಮಾಪಕ, ಕೈವಾರ, ಜತಿಗೊಂದ್ ನಟರಾಜ್ ಪೆನ್ಸಿಲ್... ಅದ್ ನನ್ ಬ್ಯಾಗ್ ನನ್ ಆಸ್ತಿ......
****ಜೈ ಭಾರತ ಜನನಿಯ ತನುಜಾತೆ; ಜಯ ಹೇ ಕರ್ನಾಟಕ……
“ಗಡಾ ರಾಜು ಮಾಷ್ಟ್ರ್ ಇನ್ನೂ ಬರ್ಲಾ, ಮೂರ್ನೆ ಪಿರೆಡ್ ಪಿ.ಟಿ ಕೆಂಬುಕ್ ಹೋಪುಕ್ ಹೇಳ್ ಲೀಡರ್ ಹತ್ರ”….
” ರಾಜು ಮಾಷ್ಟ್ರ್ನ್ ಆಗ್ಲೇ ಆಫೀಸ್ ರೂಮಂಗ್ ಕಂಡಂಗ್ ಆಯ್ತ್”…
“ಅದ್ ಬಿಳಿ ರಾಜು ಮಾಷ್ಟ್ರ್, ಲೆಕ್ಕದ್ ಮಾಷ್ಟ್ರ್ ಇನ್ನೂ ಬರ್ಲಾ”….
ಭೂದೇವಿಯ ಮುಕುಟದ ನವಮಣಿಯೇ ಅಂದದ ಚೆಂದದ….
” ಅವಾ ಎಲ್ಲ್ ಹೋತಾ ಕೆಂಬುಕೆ .. ಆಫೀಸ್ ರೂಮ್ಗೆ ಹೋಪುಕೆ ಹೆದ್ರಕಂತ.. ಹೆದ್ರಿಕಿ ಪುಚ್ಚ… ನಾವೇ ಹೊಯ್ ಕೆಂಬ”…..

ಜನನಿಯ ಜೋಗುಳ ವೇದದ ಘೋಷ.. ಜನನಿಗೆ ಜೀವವು …..
” ಸ್ಕೂಲ್ ಡೇ ಪ್ರೋಗ್ರಾಂಗೆ ಹೆಸರ್ ಕೋಟ್ಯಾ? ಸಂಜು ಮಾಷ್ಟ್ರ್ ನಾಟ್ಕ ಮಾಡ್ಸ್ತಾ ಇದ್ರ್ ಅಂಬ್ರ್” ….
” ಇಲ್ದಾ.. ಗಜೇಂದ್ರ ಸರ್ ಡೆಂಬಲ್ಸ್ಗೆ ಹೆಸ್ರ್ ಹಾಕಂಡಿರ್ .. ಮೊನ್ನೆನೆ ಪ್ರಾಕ್ಟೀಸ್ ಸ್ಟಾರ್ಟ್ ಮಾಡ್ಸಿರ್”….
ಕಪಿಲಪ ತಂಜಲ ಗೌತಮ ಜಿನನುತ, ಭಾರತ ಜನನಿಯ……
” ನಿನ್ನೆ ಸಾವಿತ್ರಿ ಟೀಚರ್ ಬಂದ್ ಡೆಂಬಲ್ಸ್ಂಗ್ ಇಪ್ಪರ್ ಸ್ವಲ್ಪ ಜನಿನ್ ಭೊಲು ತರಾರ ಡ್ಯಾನ್ಸ್ಗೆ ಕರ್ಕ ಹೊರ್ ಅದ್ರಂಗ್ ನಾನೂ ಇದ್ದೆ”….
“ಸ್ಪೋರ್ಟ್ಸ್ ಗೆ ಎಂತ ಹೆಸ್ರ್ ಕೊಟ್ಯಾ?”….
ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ …….
” ಹೌದ್.. ಒಬ್ರಿಗೆ ಮೂರೇ ಗೇಮ್ ಹೆಸ್ರ್ ಕೋಡುಕೆ…. ನಾನ್ ಹೈಜಂಪ್, ಲಾಂಗ್ ಜಂಪ್ ಮತ್ತ್ 1500 ರೇಸ್ಗೆ ಕೊಟ್ಟಿದೆ”….
” 1500 ಓಡ್ದಂಗೆ ಬಿಡ್”….
” ಲಾಸ್ಟ್ ಲಾಸ್ಟಿಗೆ ಯಾರು ಇಪ್ಪುದಿಲ್ಲ ಗಡಾ, ನೆಡ್ಕಂಡ್ ಹ್ವಾರೂ ಆತ್”….
ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ …..
” ನಿನ್ನೆ ಎಂತಕ್ ಶಾಲಿಗ್ ಬರ್ಲಾ?”..
“ಬಲಿ ಬದಿಗ್ ಹೊಯ್ನಾ.. ಒಳ್ಳೆ ಮೀನ್.. ಮನಿಗ್ ಬಪ್ಪುದೇ ಲೇಟ್ ಆಯ್ತ್… ಇನ್ನ್ ಬಂದ್ರ್ ಬೈತ್ರ್ ಅಂದೇಳಿ ರಜಿ ಮಾಡ್ದೆ”….
” ರಜಿ ಅರ್ಜಿ ತಂದಿದ್ಯಾ?”….
” ಬರ್ಕ ಬಂದಿದಿ… ಅಬ್ಬಿ ಸೈನ್ ಹಾಕುಕ್ ಯಡ್ಯಾ ಅಂದಳ್… ನೀನ್ ಒಂದ್ ಸೈನ್ ಹಾಕುಲೇ”….
” ನಿನ್ ಒಟ್ಟಿಗ್ ನಂಗೂ ಬಡ್ಗಿ ಬೀಳ್ಸ್ಕ್ ಅಂಬಂಗ್ ಇತ್ತಾ?.. ನಂಗ್ ಯಡ್ಯಾ”….
” ನಾನೇ ಹೈಕಂತೆ ಬಿಡ್… ಇನ್ನೊಂದ್ ಸರಿ ಸಿಕ್ತೆ ನೀನ್”….
ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ…..
” ಪರಿಮಳ ಬರ್ಲ್ಯಾ ಇವತ್?”…
” ಬಂದಿದಳ್… ಇವತ್ತಿಂದ ಅವ್ಳಿಗ್ ಪ್ರೇಯರ್ ಮಾಡುಕ್ ಹೊಯ್ಕ್.. ಲಲಿತ ಟೀಚರ್ ಹೇಳದ್ದ್”….
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ…..
” ನಿಮ್ದ್ ಎಂತದ್? ಪ್ರೇಯರ್ ಆಪತಿಗೂ ಸುಮ್ನೆ ಅಯ್ಕಂಬುಕ್ ಆತಿಲ್ಲ ಅಲಾ? ಆಗಳಿಂದಾ ಕಾಂತಿದ್ದೆ.. ಮಣ ಮಣ ಅಂತಿದ್ರಿ… ಸರ್ ಬರ್ಲಿ ಹೇಳಿ ಕೊಡ್ತೆ ಕಾಣ್ .. ನಿಮ್ ಹೆಸ್ರ್ ಫಷ್ಟಿಗೆ ಇತ್ತ್”…..
****
“ಮ.ಸಾ.ಅ…. ಎಷ್ಟು?”…..
ಬತ್ತಿಲ್ಲಾ ಅಂದ್ಕಂಡ್ ಇದ್ದ್ ರಾಜು ಮಾಷ್ಟ್ರ್ ಅವತ್ತ್ ಬಪ್ಪತಿಗೆ ಒಂಚು ಲೇಟ್ ಆಯ್ ಬಂದಿರ್.. ನಂಗೇ ಪ್ರಶ್ನೆ ಕೇಂತ್ರ್ ಅಂದೇಳಿ ಅವ್ರ್ ಸೊಡ್ಡ್ ಕಾಣ್ದೆ, ಖಾಲಿ ಹಾಳಿ ಮೇಲ್ ಲೆಕ್ಕು ಮಾಡ್ದಂಗ್ ನಾಟ್ಕ ಮಾಡ್ತಾ ಇದ್ದಿದಿ. ಬೆನ್ನ್ ಮೇಲ್ ಒಂದ್ ಬೀಳುಕು ಗೋತ್ತಾಯ್ತ್ ನನ್ನ್ ಪಕ್ಕದಂಗೆ ನಿಂತಿರ್ ಅಂದೇಳಿ…ಈ ಲೆಕ್ಕು ಅಂದೇಳಿ ಯಾರ್ ಮಾಡದ್ದೋ ನಮ್ ಜೀವ್ ತಿಂಬುಕೆ.. ಲೆಕ್ಕು, ಲೆಕ್ಕದ್ ಮಾಷ್ಟ್ರ್ ಅಂದ್ರ್ ಬೆನ್ನ್ ಕೋಲ್ ಎಲ್ಲಾ ನೆಮಿ ನೆಮಿ ಅಂತ್ ಇದ್ದೊ…….ಅಂಕಗಣಿತ… ಬೀಜಗಣಿತ…. ಅದೋ ಅಗಣಿತ… ಬಿಡ್ರಪ್ಪಾ…
****
ಕರ್ಣನೂ+ಅರ್ಜುನನೂ=ಕರ್ಣಾರ್ಜುನರು….ಅದಾಗ್ಲೇ ಲಲಿತ ಟೀಚರ್ ಬೋರ್ಡ್ ಮೇಲೆ ಸಂಧಿ ವಿಂಗಡಿಸಿ ಬರೀತಾ ಇದ್ರು.. ಅಷ್ಟ್ರಲ್ಲೆ ಬಂದ ನೋಟಿಸ್ ಓದಿ.. ಬ್ಯಾಗ್ ತಗೊಂಡ್ ಗಲಾಟೆ ಮಾಡದೆ ಮನೆಗೆ ಹೋಗಲಿಕ್ಕೆ ಹೇಳಿದ್ರು.. ವಿಷಯ ಏನು ಅಂತ ಅರ್ಥ ಆಗಿಲ್ಲ. ಖುಷಿ ಇಂದಾನೆ ಬ್ಯಾಗ್ ಹಿಡ್ಕೊಂಡ್ ಹೊರ್ಗಡೆ ಬಂದಿದ್ವಿ ಅಷ್ಟೇ. ವಾಹಿನಿ ಹತ್ರ ಜನ ಸೇರಿದ್ರು. ಸಣ್ಣವರು ಅನ್ನೋ ಕಾರಣಕ್ಕೆ ನಮ್ಮನ್ನೆಲ್ಲ ದೂರದಿಂದ್ಲೆ ಮನೆಗೆ ಹೊಗುವಂತೆ ಹೇಳ್ತಾ ಇದ್ರು. ಜನಸಂದಣಿಯಲ್ಲಿ ಸ್ವಲ್ಪ ಸ್ವಲ್ಪಾನೇ ಕಾಣ್ತಾ ಇತ್ತು. ಜಗಲಿ ಮೇಲೆ ಮಲಗಿಸಿದ್ದ ತಂಪು ದೇಹ.. ಕಣ್ಣು ಮುಚ್ಚಿತ್ತು.. ಸುತ್ತಲಷ್ಟು ಮಂದಿಯಲ್ಲಿ ದುಃಖ, ಮೌನ…. ವಾಲಿಬಾಲ್ ಆಡ್ತಾ ಆಡ್ತಾ ಕುಸಿದಿದ್ದ..ಉಸಿರು ಕ್ಷೀಣಿಸಿತ್ತು.. ಸ್ವಲ್ಪ ದರಲ್ಲೇ ಇಲ್ಲವಾಗಿದ್ದ.. ಶಾಲೆಯ ಅಂಗಳದಲ್ಲಿ ಆ ಅಣ್ಣನ ಹೆಜ್ಜೆ ಗುರುತು ಹಸಿಯಾಗಿಯೇ ಇತ್ತು.. ಪಾದಗಳಲ್ಲಿ ಮಾತ್ರ ಈಗ ಚೈತನ್ಯವಿಲ್ಲ… ಬೀಸು ಗಾಳಿ ಹೊತ್ತು ತಂದ ಮರಳು ಹೆಜ್ಜೆ ಗುರುತ ಅಳಿಸುತಿತ್ತು…ಸಣ್ಣವರಾಗ ಹೆಚ್ಚೇನು ತಿಳಿಯುತ್ತಿರಲಿಲ್ಲ.. ಮೊಗವಷ್ಟೇ ಬಾಡಿತ್ತು.. ರಜೆಯ ಖುಷಿ ಅಡರಿತ್ತು…
****
” ನಿಮ್ದ್ ಎಂತಾ ಸಾವ್ ಮರೆ…. ಆಚಿಗ್ ಹೊರೆ ಉಚ್ಚಿ ಹೊಂಡಕ್ಕೆ, ಈಚಿಗ್ ಬಂದ್ರೆ ಕೆಂಪ್ ಗೋಂಸ್ರಿಗ್ ಬಾಲ್ ತೊಳ್ಕಾ ಹೊತ್ರಿ.. ಮೋಸ ಮಾಡಿಯೇ ವಿನ್ ಆಯ್ನಿ … ಕಡಿಕ್ ದೊಡ್ಡ್ ದೊಡ್ಡದ್ ಹೇಳಿ”….
ನೀ ಅದೆಂತ ಹೇಳತ್.. ಅಲ್ಲ್ ಹೊಡ್ದ್ರೆ ಪೌಲ್ ಅಂದೇಳಿ ನೀವ್ ಹೇಳಿರ್ಯಾ? ಇಲ್ಲಲಾ? ನೀವೂ ಅಲ್ಲೇ ಬಾಲ್ ತೊಳ್ಕಾ ಹೊಯ್ನಿ ನಾವೇನ್ ಬ್ಯಾಡ ಅಂದಿತಾ? ಆಡುದ್ ಆರೆ ಆಡಿ ಇಲ್ಲಾಂದ್ರೆ ನಾವ್ 7th B ಒಟ್ಟಿಗ್ ಮ್ಯಾಚ್ ಕೊಡತ್”……
” ಸರಿ, ಬಾ ಮಗನೆ ..! ಮೈತುಂಬ ಗೊಂಸರ್ ಮಾಡ್ಲಿಲ್ಲಿಲ್ಲರಾ… !”
ದೊಡ್ಗಾಳಿ ಮರದ್ ಕೆಳ್ಗೆ ಒಂಟಿ ಕಾಲಂಗೆ ಟಂಕಲ್ ಆಡ್ತಾ ಇಪ್ಪು ಪರಿಮಳನ್ ಎದ್ರ್ , ಮೈತುಂಬಾ ಗೊಂಸರ್ ಮಾಡ್ಕಂಡ್, ಬೇಕಂದಳಿಯೇ , ಬಾಲ್ ಅವ್ಳ್ ಕಾಲ್ ಬುಡಕ್ಕೆ ತೊಳ್ಕಾ ಅಲ್ಲೇ ಫೋಸ್ ಕೊಟ್ರೂ … ಅವ್ಳೋ …. “ಹೇ ಹೋಗಾ … ಆಚೆ ಹೋಗಾ..ಆಡತ್ ತೋರುದಿಲ್ಯಾ “…
" ಕಣ್ಣಂಚಿನ ಕಾಡಿಗೆ ಕನಸ ಕಳವು ಮಾಡಿದೆ,ಕಾಲಂದುಗೆಯ ಕಲರವ ನಿನ್ನನೇ ಕರೆ ಎಂದಿದೆ,
ಮುಂದೆನ್ನ ನಿನ್ನಿರಿಸಿ..
ಮುಂಗುರುಳ ನೇವರಿಸಿ…
ಕಣ್ಣೋಟ ಜತೆಬೆರೆಸಿ…
ಪ್ರೀತಿ ಮಾತಾಡಿದೆ ಗೆಳತಿ…
ಪ್ರೀತಿ ಮಾತಾಡಿದೆ….
****
ಬಿಳಿ ವಸ್ತ್ರ ಹೊದಿಸಿದ್ದ ರಘು ಶೇರಿಗಾರನ ಹೆಣ; ಭಯ ಹುಟ್ಟಿಸಿತ್ತು.. ‘ಬದುಕಿನ ಸಂಜೆಯಲ್ಲಿ ಸಾವಿದೆ’ ಎಂಬ ಸಾವಿನ ಜತೆಗಿದ್ದ ಮೌಢ್ಯ ಅವಾಗ ಸರಿದಿತ್ತು…ವಯಸ್ಸಿನ್ನೂ13-14 ರ ಆಸುಪಾಸು ರಘು ಗುಣವಿಲ್ಲದ ಖಾಯಿಲೆಗೆ ಬಲಿಯಾಗಿದ್ದ… ಕೋಟಾ ಸಮೀಪದ ಮನೆಗೆ ಅಂತಿಮ ದರ್ಶನಕ್ಕಾಗಿ ಕಾಲ್ನಡಿಗೆಯಲ್ಲೇ ಇಡೀ ಶಾಲೆಯೇ ದಾರಿ ಕ್ರಮಿಸಿತ್ತು. ಮೋಡ ಮುಸುಕಿತ್ತು….ಅದರಾಚೆಗಿನ ಬೆಳಕಿನೊಳು ರಘು ಲೀನನಾಗಿದ್ದ…ನೆನಪುಗಳಷ್ಟೇ ನಮ್ಮೊಂದಿಗೆ….
****
ಮತ್ತೆ ಮಳೆಯಾಯಿತಂದು….. ಕಾರ್ಮೋಡ ಮೆದುವಾದೊಡೆ; ಹೆಂಚ ಸೊರಲಿಗೆ ಕೈಯಿಕ್ಕಿ ಮಳೆಹನಿಯ ಹಿಡಿಯುತಿದ್ದೆ, ಮೊಗಕ್ಕೆ ಜಿನುಗಿಸುತಿದ್ದೆ; ಬದುಕು ಸ್ವಚ್ಛಂದವಿತ್ತು….ಗೆಳೆಯರೊಡಗೂಡಿ, ಬಿಳಿಹಾಳೆಯೋಳು ಕಾಮನಬಿಲ್ಲಿಗೆ ಬಣ್ಣ ಬಳಿಯುತಿದ್ದೆ, ಬೆಟ್ಟ ಗುಡ್ಡದೊಳು ಹಸಿರ ಚೆಲ್ಲುತಿದ್ದೆ; ಬದುಕು ಹಸನಾಗಿತ್ತು….. ಗುರು ಹಿರಿಯಂಗೆ ನಮಿಸುತಿದ್ದೆ, ನೆಪಕ್ಕಷ್ಟೇ ಅಲ್ಲ, ಶ್ರದ್ಧೆಯಿತ್ತು, ಭಕ್ತಿಯಿತ್ತು; ಬದುಕ ಭದ್ರವಿತ್ತು……ಅಲ್ಲಿ ಎಲ್ಲರೊಳು ಎಲ್ಲವೂ ಇತ್ತು …..ಈರ್ಷ್ಯೆ, ಮತ್ಸರ, ಅಹಂಕಾರ ಇವಿಷ್ಟನ್ನು ಹೊರತಾಗಿಸಿ….
****
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ಪಡುಕರೆ… ನನ್ನ ಶಾಲೆ. ಹೌದು ಬದುಕ ಅನುಭಾವದ ಮೊದಲಷ್ಟು ಪುಟಗಳಲಿ ವಿಜ್ರಂಭಿಸುವುದು ನಾ ಕಲಿತ ಶಾಲೆಯೇ. ಹಿಂದಿರುಗಿ ಕಣ್ ಹಾಯಿಸಿದರೆ ಮೊಗ ತುಂಬ ನಗು ಮೂಡದಿರದು.ಇಲ್ಲಿ ಕಲಿತವರೆಷ್ಟೋ, ಕಲಿಸಿದವರೆಷ್ಟೋ? .. ಜ್ಞಾನ ದೇಗುಲವದು…ವಿದ್ಯೆಯೆರೆದ ಗುರುಗಳು, ಒಡನಾಡಿದ ಗೆಳಯ ಗೆಳತಿಯರು, ಕೆಡುಕ ತಿಳಿಯದ ಮುಗ್ಧತೆ. ಅಲ್ಲೊಂದಷ್ಟು ನೋವು, ಮತ್ತೊಂದಷ್ಟು ಖುಷಿ… ಚಿತ್ತಾರವದು, ಬಣ್ಣ ಬಳಿದದ್ದು…ಜೋಳಿಗೆ ತುಂಬಾ ನೆನಪ ಹೋಳಿಗೆ; ಸವಿದಷ್ಟು ಸಿಹಿ….
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ..
ಮಾನವ ಹ್ರದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ…
****“ಹೇ ಗಡಾ …. ತಂಡೇಲ್ರ್ ಮನಿ ಮಾಯ್ನ್ ಮರದಡಿ ನಾಲ್ಕ್ ಮಾಯ್ನ್ ಹಣ್ಣ್ ತಾಳ್ಸಿ, ಹುಗ್ದ್ ಇಟ್ ಬಂದಿದಿ..ಬೆಲ್ ಹೊಡುಕ್ ಓಡ್ಕ್ ಇಲ್ದಿರ್ ಯಾರರು ಹುಡ್ಕ ತಕ ಹೊತ್ರ್”…
“ಇದ್ ಎರಡ್ ಬುಕ್ ನಿನ್ ಬ್ಯಾಗಿಗ್ ಹಾಯ್ಕೋ ಇಲ್ಲರ್ ನಂಗ್ ಬಾದಿ ಆತ್ ಓಡುಕ್ ಆತಿಲ್ಲ”….
ಹೇ ಸೈಲೆಂಟ್ ಪ್ಲೀಸ್…..
ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿಧಾತ……

ಹರೀಶ್ ಕಾಂಚನ್, ಮುದ್ದುರಾಧ…











ಸಾಪಾಯ್ತ್…ಶ್ಯಾಲಿಗೊಪತಿನ್ ದಿನ ಎಲ್ಲ ಒ೦ದ್ಸತಿ ಚೆ೦ದ ನೆನ್ಪಾಯ್ತ್….😍