ಕುಂದಾಪುರ(ಜು.27): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಬಂಟ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳಡಿ ಪ್ರೋತ್ಸಾಹಧನ ವಿತರಣಾ ಸಮಾರಂಭವು ಆಗಷ್ಟ್ 18 ರಂದು ಭಾನುವಾರ ಪೂರ್ವಾಹ್ನ 9.30 ಕ್ಕೆ ಕೋಟೇಶ್ವರದ ಯುವ ಮೆರಿಡಿಯನ್ ಸಭಾಭವನದಲ್ಲಿ ನಡೆಯಲಿದೆ.
2024 ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸರೆ ಯೋಜನೆಯಡಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ನವಚೇತನ ಯೋಜನೆಯಡಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ ವಿತರಣೆ ನಡೆಯಲಿದೆ. ಹೀಗೆ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಒಟ್ಟು 25 ಲಕ್ಷ ರೂಪಾಯಿ ಮೊತ್ತದ ಪ್ರೋತ್ಸಾಹಧನ ವಿತರಣೆ ನಡೆಯಲಿದ್ದು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಚ್. ಎಸ್ ಬಲ್ಲಾಳ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ 2024-26ನೇ ಅವಧಿಗೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಸಂಸ್ಮರಣಾ ಪ್ರಶಸ್ತಿಗಳ ಪ್ರದಾನ ನಡೆಯಲಿದೆ ಎಂಬುದಾಗಿ ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ ಮತ್ತು ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.