ಕುಂದಾಪುರದ ಪರಿಸರದಲ್ಲಿ ಹಲವು ವರ್ಷಗಳಿಂದ ಈ ಅಜ್ಜಿಯನ್ನು ನೋಡುತ್ತಿದ್ದೆನೆ. ಕಪ್ಪು ಸೀರೆಯನ್ನುಟ್ಟು, ಹಣೆಗೆ ವಿಭೂತಿಯನ್ನು ಹಚ್ಚಿ , ಕೈಯಲ್ಲೊಂದು ಚೀಲ ಹಾಗೂ ಕೋಲನ್ನು ಹಿಡಿದು, ಊರೂರು ಅಲೆದು, ಮನೆ ಮನೆಗೆ ತೆರಳಿ ಬಿಕ್ಷೆ ಬೇಡುವುದು ಇವರ ಕಾಯಕ. ಗಂಗೊಳ್ಳಿ, ತ್ರಾಸಿ, ಮರವಂತೆ ಹೀಗೆ ಸುತ್ತಮುತ್ತಲಿನ ಊರುಗಳಿಗೆ ತೆರಳಿ ಭಿಕ್ಷೆ ಬೇಡುವ ಈ ಅಜ್ಜಿ ಯಾರ ಬಳಿಯೂ ಒತ್ತಾಯದಿಂದ ಹಣ ಕೇಳಿದವರಲ್ಲ, ಹಣ ಕೊಡದಿದ್ದರೆ ಕೆಟ್ಟ ಪದ ಬಳಕೆ ಮಾಡಿದವರೂ ಅಲ್ಲಾ. ವಿಶೇಷವಾಗಿ ನವೆಂಬರ್ ನಿಂದ ಜನವರಿ ತನಕ ಅಯ್ಯಪ್ಪ ಮಾಲಾ ವ್ರತದಾರಿಗಳು ಕಪ್ಪು ಬಟ್ಟೆಯನ್ನುಟ್ಟು ವ್ರತ ಆಚರಿಸುವ ಸಂಧರ್ಭದಲ್ಲಿ ಈ ಅಜ್ಜಿಯ ಒಡಾಟ ಇನ್ನೂ ಜೋರು.
ಎನೋ ಹೊಟ್ಟೆಪಾಡಿಗೊಸ್ಕರ ಕಪ್ಪುಬಟ್ಟೆ ತೊಟ್ಟು, ಹಣೆಗೆ ವಿಭೂತಿಯ ಇಟ್ಟು ಸಂದರ್ಭದ ಲಾಭ ಪಡೆಯಲು ಈ ಅಜ್ಜಿ ನಾಟಕ ಮಾಡುತ್ತಿರಬಹುವುದು ಅನ್ನುವುದು ಹಲವರ ಅಂಬೋಣ. ಆದರೆ ಈ ಅಜ್ಜಿ ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಹಣವನ್ನು ದೇವಾಲಯಗಳ ಅನ್ನದಾನ ನಿಧಿಗೆ ನೀಡುತ್ತಿರುವ ಸಂಗತಿ ನಿಜಕ್ಕೂ ರೋಚಕ ಹಾಗೂ ಆಶ್ಚರ್ಯಕರ ಸಂಗತಿ.
ಸದಾ ಕಪ್ಪುಸೀರೆ, ಹಣೆಗೆ ವಿಭೂತಿ, ಕೊರಳಲ್ಲಿ ಅಯ್ಯಪ್ಪ ವ್ರತ ಮಾಲೆ ಧರಿಸುವ ಅಶ್ವತ್ತಮ್ಮ ಹೆಸರಿನ ಈ ಅಜ್ಜಿ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಸದ್ಯಕ್ಕೆ ಕುಂದಾಪುರದ ಕಂಚುಗೋಡು ಗ್ರಾಮದಲ್ಲಿ ವಾಸವಾಗಿದ್ದು, ತಾನು ಭಿಕ್ಷಾಟನೆಯ ಮೂಲಕ ಸಂಗ್ರಹಿಸಿದ ಹಣವನ್ನು ಸಣ್ಣ ಉಳಿತಾಯದ ಮೂಲಕ ಸಂಗ್ರಹಿಸಿಟ್ಟು, ದೇವಾಲಯಗಳ ಅನ್ನದಾನ ನಿಧಿಗೆ ನೀಡುತ್ತಿದ್ದಾರೆ. ಈಗಾಗಲೇ ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಸರಿಸುಮಾರು 3 ಲಕ್ಷಕ್ಕೂ ಮಿಕ್ಕಿ ಹಣವನ್ನು ರಾಜ್ಯದ ವಿವಿಧ ದೇವಾಲಯಗಳ ಅನ್ನದಾನ ನಿಧಿಗೆ ನೀಡಿರುವ ಈ ಮಹಾಮಾತೆ ಇತ್ತೀಚೆಗೆ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಅನ್ನದಾನ ನಿಧಿಗೆ 1 ಲಕ್ಷ ಮೊತ್ತವನ್ನು ನೀಡಿರುವ ಸುದ್ದಿ ಮಾದ್ಯಮಗಳಲ್ಲಿ, ಸಾಮಾಜಿಕ ಜಾಲಾತಾಣದಲ್ಲಿ ಪ್ರಕಟಗೊಳ್ಳುತ್ತಿದೆ.
ನಾನು ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ಈ ಸೇವೆ ಮಾಡುತ್ತಿದ್ದು, ಈ ಬಾರಿಯೂ ದೇಣಿಗೆ ನೀಡುತ್ತಿದ್ದು , ಮನುಕುಲಕ್ಕೆ ಬಂದೊದಗಿದ ಕರೋನಾ ಕಂಟಕ ಅದಷ್ಟೂ ಬೇಗ ನಿವಾರಣೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಈ ದೇಣಿಗೆ ನೀಡುತ್ತಿದ್ದೇನೆ ಅನ್ನುವುದು ಅಜ್ಜಿಯ ಮನದಾಳದ ಮಾತು.
ಕರೋನಾಘಾತದ ಈ ದಿನಗಳಲ್ಲಿ 100 ರೂ ದೇಣಿಗೆ ನೀಡಲು 100 ಬಾರಿ ಆಲೋಚನೆ ಮಾಡುವ ಜನರ ನಡುವೆ ಈ ಅಜ್ಜಿ ಬರೋಬ್ಬರಿ 1 ಲಕ್ಷದ ಮೊತ್ತವನ್ನು ದೇವಾಲಯಕ್ಕೆ ದೇಣಿಗೆ ನೀಡಿರುವುದು ಬೆಲೆ ಕಟ್ಟಲಾಗದ ಸಂಗತಿ. ಭಿಕ್ಷಾಟನೆ ಮಾಡಿ ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಲು ಆ ಅಜ್ಜಿ ಎಷ್ಟು ಸಮಯ ತೆಗೆದುಕೊಂಡಿರ ಬಹುವುದು? ಸಂಗ್ರಹಿಸಿದ ಹಣವನ್ನು ದೇಣಿಗೆಯ ರೂಪದಲ್ಲಿ ನೀಡಲು ಆ ಅಜ್ಜಿಯ ಅಂತಃಕರಣದಲ್ಲಿ ಹುದುಗಿದ್ದ ಆ ತರನಾದ ಅಲೋಚನೆಗೆ ಪ್ರೇರಣೆಯಾರಿರ ಬಹುವುದು? ಈ ಅಜ್ಜಿಯ ಜನಪರ ಕಾಳಜಿ ಪರಿಶ್ರಮ, ತಾಳ್ಮೆ ನಿಜಕ್ಕೂ ಪ್ರಶಂಸನೀಯ.
ಈ ಸ್ವಾರ್ಥ ಪ್ರಪಂಚದಲ್ಲಿ ಇಂತಹ ನಿಸ್ವಾರ್ಥಿ ಅಜ್ಜಿಯಿಂದ ನಾವು ಕಲಿಯುವುದು ತುಂಬಾ ಇದೆ…
ಯಾಕೋ ಈ ಕಪ್ಪು ಸೀರೆಯ ಅಜ್ಜಿ ದಿ ಗ್ರೇಟ್ ಲೇಡಿ ಅನ್ಸಬಿಟ್ರು..
Hats off to you Ajji
ಲೇಖನ : ಪ್ರವೀಣ್ ಗಂಗೊಳ್ಳಿ