ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ, ಉತ್ತಮ ಅಂಕಗಳು ಮತ್ತು ಉನ್ನತ ಹುದ್ದೆಗಳತ್ತ ದೌಡಾಯಿಸುತ್ತಿದ್ದಾರೆ. ಆದರೆ ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣವು ಸಮಾಜಕ್ಕೆ ಅಪೂರ್ಣವಾದ ಕೊಡುಗೆಯಷ್ಟೇ. ಈ ಹಿನ್ನೆಲೆಯಲ್ಲಿಯೇ ಡಾ. ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರವು ನಿಜವಾದ ಅರ್ಥದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.

ಈ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ವಿಶೇಷವಾಗಿ ಕಲಿಸಲಾಗುತ್ತಿದೆ. ಪ್ರತಿ ತರಗತಿಗೂ “ಮೌಲ್ಯ ಶಿಕ್ಷಣ” ಪೀರಿಯಡ್ ಅನ್ನು ಕಡ್ಡಾಯವಾಗಿ ನಿಗದಿಪಡಿಸಿರುವುದು ಇದರ ವೈಶಿಷ್ಟ್ಯ. ವಿಶೇಷವೆಂದರೆ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ|| ಕೆ. ಉಮೇಶ್ ಶೆಟ್ಟಿ ಸ್ವತಃ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಬೋಧನೆ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣಾದಾಯಕವಾಗಿದೆ.
ಇಲ್ಲಿ ರೂಪಿಸಲಾದ ಮೌಲ್ಯ ಶಿಕ್ಷಣ ಪಾಠ್ಯಕ್ರಮವು ಕೇವಲ ಉಪದೇಶಗಳಲ್ಲ; ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ದಾರಿ ತೋರುವ ಸುವ್ಯವಸ್ಥಿತ ಪಠ್ಯವಾಗಿದೆ. ಪ್ರಾಮಾಣಿಕತೆ, ಸತ್ಯನಿಷ್ಠೆ, ವಿನಯ, ದಯೆ, ಒಳ್ಳೆಯತನ, ಆತ್ಮವಿಶ್ವಾಸ, ಕಾಳಜಿ, ಪ್ರೀತಿ ಮುಂತಾದ ಮಹತ್ವದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಈ ಪಾಠಗಳು ವಿದ್ಯಾರ್ಥಿಗಳ ಮನೋಭಾವದಲ್ಲಿ ಮಹತ್ತರ ಬದಲಾವಣೆ ತರಲು ಕಾರಣವಾಗಿವೆ.
ಇದಲ್ಲದೆ, ಪ್ರತಿಯೊಂದು ಹದಿನೈದು ದಿನಗಳಿಗೊಮ್ಮೆ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ವತಿಯಿಂದ “ಜೀವನ ಮೌಲ್ಯ ಮಾಲಿಕೆ” ಸರಣಿ ಕಾರ್ಯಕ್ರಮವನ್ನು ಎಲ್ಲ ವಿದ್ಯಾರ್ಥಿಗಳಿಗೆ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಪ್ರಥಮ ತೃತೀಯ ಲಿಂಗಿ ಶಿಕ್ಷಕಿಯಾದ ಕ್ರಿಸ್ಟಿಕಾ ಮ್ಯಾಡಂ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದುದು ವಿಶೇಷ ಕ್ಷಣವಾಗಿತ್ತು. ಅವರ ಜೀವನ ಪಯಣ ಮತ್ತು ಸಾಧನೆ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯವನ್ನು ತುಂಬಿತು.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಸಂಸತ್ತಿನಲ್ಲಿ ಖ್ಯಾತ ಸಮಾಜಸೇವಕಿಯಾದ ಸುಧಾ ಮೂರ್ತಿ ಸೇರಿದಂತೆ ಹಲವರು ಶಾಲಾ ಮಕ್ಕಳಿಗೆ ಮೌಲ್ಯ ಶಿಕ್ಷಣ ಕಡ್ಡಾಯಗೊಳಿಸುವ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ ಎಂಬ ಸುದ್ದಿ ನಮಗೆ ತಿಳಿದಿದೆ. ಆದರೆ ಈ ಉತ್ತಮ ಅಭ್ಯಾಸವನ್ನು ನಮ್ಮ ಕಾಲೇಜು ಮೂರು ವರ್ಷಗಳ ಹಿಂದೆಯೇ ಪ್ರಾರಂಭಿಸಿರುವುದು ಹೆಮ್ಮೆಯ ವಿಷಯ. ಹಿರಿಯ ಉಪನ್ಯಾಸಕರು ಈ ತರಗತಿಗಳನ್ನು ನಡೆಸುತ್ತಿರುವುದು ಅದರ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ.
ಇಂದಿನ ಯುವಜನತೆ ಉನ್ನತ ಪದವಿಗಳನ್ನು ಪಡೆದು ಹೊರಬರುತ್ತಿದ್ದರೂ, ಕೆಲವೊಮ್ಮೆ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಸಮಸ್ಯೆಗಳು ಉದ್ಭವಿಸುತ್ತಿರುವುದು ನೋವಿನ ಸಂಗತಿ. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಉತ್ತಮ ನಾಗರಿಕರನ್ನು ರೂಪಿಸಲು ಕೂಡ ಆಗಬೇಕು. ಮೌಲ್ಯ ಶಿಕ್ಷಣವು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಶ್ರೇಷ್ಠಗೊಳಿಸಿ, ಸಮಾಜಮುಖಿ ಚಿಂತನೆಗೆ ದಾರಿ ಮಾಡಿಕೊಡುತ್ತದೆ.
ನಮ್ಮ ಕಾಲೇಜಿನಲ್ಲಿ ಮೌಲ್ಯ ಶಿಕ್ಷಣದ ಫಲವಾಗಿ ವಿದ್ಯಾರ್ಥಿಗಳ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ. ಪರಸ್ಪರ ಗೌರವ, ಸಹಕಾರ, ಶಿಸ್ತು ಮತ್ತು ಹೊಣೆಗಾರಿಕೆಯ ಭಾವನೆ ಹೆಚ್ಚಾಗಿದೆ. ಇದು ಶಿಕ್ಷಣದ ನಿಜವಾದ ಯಶಸ್ಸಿನ ಲಕ್ಷಣವಾಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಮೌಲ್ಯ ಶಿಕ್ಷಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಜ್ಞಾನ ಮತ್ತು ಮೌಲ್ಯಗಳ ಸಂಯೋಜನೆಯೇ ಭವಿಷ್ಯದ ಸಮೃದ್ಧ ಸಮಾಜವನ್ನು ನಿರ್ಮಿಸುತ್ತದೆ.
ಈ ನಿಟ್ಟಿನಲ್ಲಿ ಡಾ|| ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹಾಗಾಗಿ ಸಮಾಜದ ಉಜ್ವಲ ಭವಿಷ್ಯಕ್ಕಾಗಿ ಮೌಲ್ಯ ಶಿಕ್ಷಣವೇ ಬಲವಾದ ಅಡಿಪಾಯವಾಗಬೇಕು ಎನ್ನುವ ಧೋರಣೆ ಅನುಸರಿಸುವ ಸವಾಲು ಒದಗಿ ಬಂದಿದೆ. ನಾವು ನೀವೆಲ್ಲರೂ ಯೋಚಿಸಬೇಕಾದ ಪ್ರಶ್ನೆ ಏನೆಂದರೆ – ಉನ್ನತ ವಿದ್ಯೆ ಅಷ್ಟೇ ಸಾಕೇ? ಅಥವಾ ಮೌಲ್ಯಪೂರ್ಣ ಜೀವನವೇ ನಿಜವಾದ ಯಶಸ್ಸೇ?

ನಿರ್ಮಲ ಬಿಲ್ಲವ
ಸಹಾಯಕ ಪ್ರಾಧ್ಯಾಪಕರು










