ಕುoದಾಪುರ (ಮಾರ್ಚ್ 20): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಆಯೋಜಿಸಲಾದ ವಿ-ಗ್ರೋ 2026 ಬಿಸಿನೆಸ್ ಡೇ ವಾಣಿಜ್ಯ ಹಬ್ಬವು ಯಶಸ್ವಿಯಾಗಿ ಸಂಪನ್ನಗೊoಡಿತು.

ಅಂತಿಮ ಹಾಗೂ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳಿಗೆ ಆಯೋಜಿಸಿದ ಈ ಅಂತರ್-ತರಗತಿ ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ಆಯೋಜಿಸಲಾಯಿತು. ಮೊದಲನೇ ಹಂತದಲ್ಲಿ ವ್ಯವಹಾರ ಯೋಜನೆಯ ಪ್ರಸ್ತುತಿ, ಎರಡನೇ ಹಂತದಲ್ಲಿ ವ್ಯವಹಾರ ಮೇಳದ ಭಾಗವಾಗಿ ವಿದ್ಯಾರ್ಥಿಗಳೇ ತಯಾರಿಸಿದ ಉತ್ಪನ್ನಗಳೊಂದಿಗೆ ಇತರ ವಸ್ತುಗಳ ಮಾರಾಟ, ಹಾಗೂ ಮೂರನೇ ಹಂತದಲ್ಲಿ ಹಣಕಾಸಿನ ಆಯ-ವ್ಯಯ ಪಟ್ಟಿಗಳ ಪ್ರಸ್ತುತಿ ನಡೆಸಲಾಯಿತು.

ಮುಖ್ಯ ಅತಿಥಿಗಳಾದ ಶ್ರೀನಿವಾಸ ವಿಶ್ವವಿದ್ಯಾನಿಲಯ ಮಂಗಳೂರು ಇಲ್ಲಿನ ಪ್ರಾಧ್ಯಾಪಕರು ಹಾಗೂ ಸಂಶೋಧನ ಮಾರ್ಗದರ್ಶಕರಾದ ಡಾ| ಗಣೇಶ್ ಭಟ್ ಎಸ್., ಅವರು ಮಾತನಾಡಿ, ವರ್ತಮಾನ ಕಾಲಘಟ್ಟದ ವ್ಯವಹಾರ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳು ಹೊಂದಬೇಕಾದ ವ್ಯವಹಾರಿಕ ಕೌಶಲ್ಯಗಳ ಕುರಿತು ತಿಳಿಸಿದರು. ಇದೇ ಸಂದರ್ಭ ಕರಾವಳಿಯ ವ್ಯವಹಾರಿಕ ಜಗತ್ತಿನಲ್ಲಾದ ಸ್ಥಿತ್ಯಂತರಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ತೀರ್ಪುಗಾರರಾಗಿ ಪಾಲ್ಗೊಂಡ ಮಹಿಳಾ ಉದ್ಯಮಿ, ತೆಕ್ಕಟ್ಟೆ ಕಾಮಾಕ್ಷಿ ಫಾರಂನ ಪ್ರವರ್ತಕರಾದ ದಿವ್ಯ ನಾಯಕ್, ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ದಿವ್ಯ ಶೆಟ್ಟಿ ಮತ್ತು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸುನೀಲ್ ಮೊಗವೀರ, ಜೊತೆಗೆ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ಕಾರ್ಯಕ್ರಮದ ಸಂಯೋಜಕರಾಗಿರುವ ಸತೀಶ್ ಕಾಂಚನ್, ರ್ಯಾಂಕ್ ವಿಜೇತ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭ ರ್ಯಾಂಕ್ ವಿಜೇತ ನಾಲ್ಕು ವಿದ್ಯಾರ್ಥಿಗಳನ್ನು ಹಾಗೂ ಅಧಿಕ ಲಾಭಗಳಿಸಿರುವ ತಂಡಗಳಿಗೆ ನೀಡಲಾಗುವ ಸಿಲ್ವರ್ ರೋಲಿಂಗ್ ಟ್ರೋಫಿಯ ಪ್ರಾಯೋಜಕರಾದ ಪೂರ್ಣಚಂದ್ರ ನಾಯಕ್ ಅವರ ತಾಯಿ ಸರಸ್ವತಿ ಜಿ. ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಯೋಜಕರಾದ ಯೋಗೀಶ್ ಶಾನುಭೋಗ್ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್ ಪ್ರಾಸ್ತಾವಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸತೀಶ್ ಶೆಟ್ಟಿ ಹೆಸ್ಕತ್ತೂರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ, ದೀಪಾ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ವೀ-ಗ್ರೋ 2026 ಸ್ಪರ್ಧೆಯಲ್ಲಿ ಸಮಗ್ರ ಪ್ರಥಮ ಸ್ಥಾನವನ್ನು ಬಿ.ಕಾಂ. (ಡಿ) ಮತ್ತು ದ್ವಿತೀಯ ಸ್ಥಾನವನ್ನು ಅಂತಿಮ ತೃತೀಯ ಬಿ.ಕಾಂ. (ಇ) ವಿದ್ಯಾರ್ಥಿಗಳು ಪಡೆದುಕೊಂಡರು.










