ಉಡುಪಿ (ಫೆ. 16): ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲೊಂದಾದ,ಮೊಗವೀರ ಸಮುದಾಯದ ಆರಾಧ್ಯ ದೇವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಗೆ ಶಿಲಾನ್ಯಾಸ ಇದೇ ಫೆಬ್ರವರಿ 21 ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ.
ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ.ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜಾ ಡಾ. ಜಿ. ಶಂಕರ್ ರವರ ಮುಂದಾಳತ್ವದಲ್ಲಿ, ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ದೇವಸ್ಥಾನದ ಸಮಗ್ರ ಜೀರ್ಣೋದ್ದಾರದ ಹಿನ್ನೆಲೆಯಲ್ಲಿ ಫೆಬ್ರವರಿ 12ರಿಂದ 29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.