ಹಸಿದ ಹೊಟ್ಟೆ ಮಾತ್ರ ಆಹಾರವನ್ನು ಹುಡುಕುತ್ತದೆ. ಹಸಿವಿಲ್ಲದವನಿಗೆ ಆಹಾರವು ಅಗತ್ಯ ಅನಿಸುವುದಿಲ್ಲ. ಈ ಸಮಾಜದ ಪರಿಸ್ಥಿತಿ ಕೂಡ ಹಾಗೇ ಆಗಿದೆ. ಇಲ್ಲಿ ಶೋಷಿತರು ,ಬಡವರು, ಅವಕಾಶ ವಂಚಿತ ಸಮುದಾಯಗಳು ಸಾಮಾಜಿಕವಾಗಿ ನ್ಯಾಯದಿಂದ ವಂಚಿತರಾಗಿದ್ದಾರೆ. ಇವರಿಗೆ ನ್ಯಾಯವೆಂಬ ಹಸಿವಿದೆ..ಆದರೆ….!
ಹಸಿದವನಿಗೆ ಮಾತ್ರ ತಿಳಿಯುವುದು ಅನ್ನದ ಮಹತ್ವ. ಅನ್ಯಾಯಕ್ಕೊಳಗಾದವನಿಗೆ ತಿಳಿಯುವುದು ನ್ಯಾಯದ ಮಹತ್ವ .ಹಸಿವಿಲ್ಲದ ವ್ಯಕ್ತಿ ಹೇಗೆ ಆಹಾರವನ್ನು ಹುಡುಕುವುದಿಲ್ಲವೊ ಹಾಗೆ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಪ್ರಬಲ ಹೊಂದಿರುವ ವ್ಯಕ್ತಿ ಅನ್ಯಾಯದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ .ತನ್ನ ಪಾಡಿಗೆ ತಾನು ಸುಖಕರ ಜೀವನವನ್ನು ನಡೆಸಿಕೊಂಡು ನೆಮ್ಮದಿಯಿಂದಿರುತ್ತಾರೆ. ಕಾರಣ ಅವರಿಗೆ ನ್ಯಾಯದ ಹಸಿವಿಲ್ಲ ,ಅದರ ಮಹತ್ವ ಅವರಿಗೆ ತಿಳಿದಿಲ್ಲ .
ಅನ್ಯಾಯಕ್ಕೊಳಗಾದವರು, ಬಡವರು, ಸಮಾಜದ ಹೆಚ್ಚಿನ ಕ್ಷೇತ್ರಗಳಲ್ಲಿ ಅಪ್ರಬಲರೇ ಆಗಿರುವುದರಿಂದ ಅವರ ಮಾತಿಗೆ, ಹೋರಾಟಗಳಿಗೆ ಎಲ್ಲಿಯೂ ಬೆಲೆ ಇಲ್ಲ. ಅವರು ಹೆಚ್ಚು -ಹೆಚ್ಚು ಅನ್ಯಾಯ, ಶೋಷಣೆಗೆ ಒಳಗಾಗುವುದು ಅವರ ಜೀವನದ ಸಾಮಾನ್ಯ ಸಂಗತಿ ಎಂಬಂತೆ ಬಿಂಬಿಸಲಾಗುತ್ತದೆ. ಇಲ್ಲಿ ಸ್ವಾಮಿ ವಿವೇಕಾನಂದರ ಒಂದು ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಅವರು ಹೇಳಿದಂತೆ ನನ್ನ ದೇಶ ಯಾವಾಗ ಪ್ರಬಲವಾಗುದೆಂದರೆ …. ನನ್ನ ದೇಶದ ಪ್ರತಿಯೊಬ್ಬ ವಿದ್ಯಾವಂತ ವ್ಯಕ್ತಿ ದರಿದ್ರನನ್ನು ಗೌರವಿಸಿದಾಗ….! ದರಿದ್ರನನ್ನು ಗೌರವಿಸುವುದು ಎಂದರೆ ಏನರ್ಥ ? ಅಂದರೆ ಬಡವರಿಗೆ, ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಜನ ಸಮೂಹಗಳ ಜೊತೆ ಪ್ರಬಲರಾದ ವಿದ್ಯಾವಂತರು ನಿಂತು ಅವರನ್ನು ಕೂಡ ಪ್ರಬಲ ರನ್ನಾಗಿಸುವುದು ಎಂಬುದಾಗಿದೆ. ಒಂದು ವೇಳೆ ಇಂತಹ ಕಾರ್ಯ ನಡೆಯದಿದ್ದರೆ ಒಂದೆಡೆ ದರಿದ್ರರ ಸಂಖ್ಯೆ ಹೆಚ್ಚುತ್ತ ಹೋಗಿ ಇಡೀ ದೇಶವೇ ದಾರಿದ್ರ್ಯದ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆಗಳು ಇರುತ್ತದೆ ಎನ್ನುವುದು ಸ್ವಾಮಿ ವಿವೇಕಾನಂದರ ಮಾತಿನ ಒಳ ಅರ್ಥ ದಲ್ಲಿ ನಾವು ತಿಳಿದುಕೊಳ್ಳಬಹುದಾಗಿದೆ.

ತನ್ನ ಹಸಿವನ್ನು ತಣಿಸಿಕೊಳ್ಳುವುದರ ಜೊತೆಗೆ ಪರರ ಹಸಿವನ್ನು ತಣಿಸುವುದು ದೇಶದ ಪ್ರತಿ ಪ್ರಜೆಯ ಕರ್ತವ್ಯ. ಯಾರಿಗೋ ಆಗುತ್ತಿರುವ ಅನ್ಯಾಯವನ್ನು ಕಂಡು ಇದು ನನಗೆ ಸಂಬಂಧವೇ ಇಲ್ಲ ಎಂಬಂತೆ ನಾವು ಮುನ್ನಡೆದರೆ ಮುಂದೊಂದು ದಿನ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆ ಅನ್ಯಾಯವು ನಮ್ಮ ಬಳಿಗೆ ಸುಳಿಯದೇ ಇರಲಾರದು. ಒಂದು ಬುಟ್ಟಿಯಲ್ಲಿ ಒಂದು ಹಣ್ಣು ಕೊಳೆತರೆ ಆ ಹಣ್ಣಿನ ಕೊಳೆತದ ತೀವ್ರತೆ ಎಲ್ಲಾ ಹಣ್ಣುಗಳಿಗೆ ತಾಕುವಂತೆ ಇದು ಸಹ ಹಾಗೆ ಆಗಿದೆ. ಒಂದೆಡೆ ಎಲ್ಲೋ ಆಗುವ ಅನ್ಯಾಯಗಳಿಗೆ, ಶೋಷಣೆಗಳಿಗೆ ನ್ಯಾಯ ಸಿಗದೆ ಇದ್ದರೆ ಆ ಅನ್ಯಾಯವು ಇಡೀ ದೇಶವನ್ನು ಖಂಡಿತವಾಗಿ ಪಸರಿಸುತ್ತದೆ.
ಅರ್ಜೆಂಟೀನಾದಲ್ಲಿ ಹುಟ್ಟಿದ ಕ್ರಾಂತಿಕಾರಿ ಚೆಗುವರಾ ಅವರ ಮಾತನ್ನು ನೆನಪಿಸಿಕೊಳ್ಳಬಹುದು.
ಪ್ರಪಂಚದ ಯಾವ ಮೂಲೆಯಲ್ಲಿ ಅನ್ಯಾಯ ನಡೆದರೂ ನೀನು ಧ್ವನಿ ಎತ್ತು, ಆಗ ನೀನು ನನ್ನ ಒಡನಾಡಿ ಯಾಗುವೆ ಎಂದು. ಅಂದರೆ ಎಲ್ಲೇ ಅನ್ಯಾಯ ನಡೆದರೂ ಜನರು ಧ್ವನಿ ಎತ್ತಿದರೆ ಅನ್ಯಾಯ ಎಲ್ಲಿಯೂ ಕೂಡ ನಡೆಯುವುದಿಲ್ಲ ಎಂಬುದು ಚೆ ಗುವೇರಾ ಅವರ ಮಾತಿನ ಅರ್ಥ.
ನಮ್ಮ ದೇಶದಲ್ಲಿ ಶೋಷಣೆ ರಹಿತ, ದಬ್ಬಾಳಿಕೆ ರಹಿತ ಹಾಗೂ ನ್ಯಾಯಯುತ ಪ್ರಬುದ್ಧ ಸಮಾಜ ನಿರ್ಮಾಣವಾಗಲು ಪ್ರತಿ ವ್ಯಕ್ತಿಯಲ್ಲೂ ಪ್ರಬುದ್ಧತೆ ಬೆಳೆಯಬೇಕು. ಈ ದೇಶದ ಒರ್ವ ಪ್ರಜೆಯಾಗಿ ನನ್ನ ಕಾಳಜಿಯನ್ನು ಬರಹಗಳಲ್ಲಿ ವ್ಯಕ್ತಪಡಿಸಿದ್ದೇನೆ. ಏನಾದರು ತಪ್ಪಿದ್ದಲ್ಲಿ ಕ್ಷಮಿಸಿ ..

— ಮಾರುತಿ ಟಿ ಡಿ ಬೈಂದೂರು










