ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…?
ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ?
ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. ಕೆಳಗೆ ಇಣುಕಿ ನೋಡಿದೆ.ಮನೆಯವರು ಹರಟೆಹೊಡೆಯುತ್ತಾ ಇದ್ದಾರೆ, ಮೊಮ್ಮಕ್ಕಳು ಮೊಬೈಲ್ ನಲ್ಲಿ ತಲ್ಲೀನ,ಬಂದವರು ಕೆಲವರು ಸೆಲ್ಫಿ ಕ್ಲಿಕ್ಕಿಸಿಸ್ಟೇಟಸ್ ಗೆ ಹಾಕಿಕೊಂಡೂ ಆಗಿದೆ ,ಇನ್ನೂ ಸ್ವಲ್ಪ ದಿನ ಇರಬೇಕಾಗಿತ್ತು,ಏನು ಮಾಡೋದು ಹಣೆಬರಹದಲ್ಲಿ ಅಷ್ಟೇ ಬರೆದಿದ್ದರೆ? ಇಷ್ಟೇನಾ ಕೇಳಿದ ಸಾಂತ್ವನದ ಮಾತು..ಇಷ್ಟೇನಾ ನಿನ್ನ ಬೆಲೆ.?
ನಿನ್ನ ಹೆಣ ಹೊತ್ತವರು,ಹೆಣ ಸುಟ್ಟವರು,ಮೈಕೈ ನೋವಿನ ಶಮನಕ್ಕೆ ಮದ್ದು ಕುಡಿಯುತ್ತಿದ್ದಾರೆ, ಮನೆಯಲ್ಲ ಶುಚಿಯಾಗಿ ಗಂಜಿ ಚಟ್ನಿಯ ಊಟವು ಸಿದ್ದವಾಗಿದೆ. ಹೊರಗಡೆ ನಿನ್ನ ಸಂಬಂಧಿಯ ತಮಾಷೆಯ ಮಾತು ಕೇಳಿ, ಕೋಣೆಯೊಳಗೆ ನಿನ್ನ ಹೆಂಡತಿ ಮಗ ನಕ್ಕು ಸುಮ್ಮನಾಗಲುಪ್ರಯತ್ನಿಸುತ್ತಿದ್ದಾರೆ.ಇಷ್ಟೇ ನಿನ್ನ ಬೆಲೆ
ಮರುದಿನ ಮಗ ಒಂದು ದೊಡ್ಡ ಫೋಟೋತೂಗು ಹಾಕಿದ. ನನ್ನ ಫೋಟೋ ಅದು,ಅದಕ್ಕೊಂದು ಹಾರ ಹಾಕಿದ,ಕೆಲವೊಂದು ದಿನ, ಅಗರ ಬತ್ತಿ ಉರಿಸಿದ, ದಿನ ಪತ್ರಿಕೆಯಲ್ಲಿ ಭಾವಪೂರ್ಣಶೃದ್ಧಾoಜಲಿಯೂ ಬಂದಾಯಿತು,ತನ್ನ ಹೆಸರು ಹಾಕಿಲ್ಲ ಎಂದು ಮುನಿಸು ಕೆಲವರಿಗೆ, ಕೆಲವು ದಿನಗಳ ನಂತರ ಮರಳಿ ಬಾ ಗೆಳೆಯ ಎಂದು ಬ್ಯಾನರ್ ಹಾಕಿದ್ದ ಅದೇ ಸ್ನೇಹಿತರು ಅದನ್ನು ಕಿತ್ತು ತೆಗೆದು ಹೊಸ ವರ್ಷಕ್ಕೆ ಶುಭ ಕೋರುವ ಬ್ಯಾನರನ್ನೂ ಅಂಟಿಸಿ ಆಯಿತು. ಈಗ ನನ್ನ ಮನೆಯಲ್ಲಿ ನನ್ನ ಫೋಟೋ ಮೇಲೆ ಜಮಾಯಿಸಿದ ಧೂಳನ್ನು ಕೂಡಾತೆಗೆಯುವವರಿಲ್ಲ.ಇಷ್ಟೇನಾ ನಿನ್ನ ಬೆಲೆ?..
ಜೀವನವೆಲ್ಲಾ ದುಡಿದೆ,ದಣಿದೆ.ನನ್ನ ಹೊಟ್ಟೆ ಬಟ್ಟೆ ಕಟ್ಟಿಹೆಂಡತಿ, ಮಕ್ಕಳಿಗೆ ಅಂತ ಎಲ್ಲವನ್ನೂ ಜಮಾ ಮಾಡಿದೆ, ಎಲ್ಲವೂ, ನನ್ನದು, ನನ್ನದು..ಏನೋ ಒಣ ಜಂಭ …ತನ್ನವರಿಗೆಲ್ಲ ಮಾಡಿದೆಆದರೆ..ತನಗಾಗಿ ..??? ಶೂನ್ಯ.. ಬರೀ ಶೂನ್ಯಹೊರಟಿರುವೆ ಖಾಲಿ ಬೊಗಸೆಯಲ್ಲಿ,ಒಂದು ಹುಲ್ಲು ಕಡ್ಡಿಯೂ,ಜೊತೆಗಿಲ್ಲ ,ಹಾಕಿದ್ದ ಉಡಿದಾರವನ್ನೂ ಬಿಟ್ಟಿಲ್ಲ,ಎಲ್ಲವನ್ನು ಇಲ್ಲೇ ಬಿಟ್ಟು ಹೋಗಿ ಆಗಿದೆ.ಇಷ್ಟೇನಾ ನಿನ್ನ ಬೆಲೆ?
ಎಲ್ಲವೂ ತನಗೇ ಬೇಕು ಎಂದುತೋರಿಸಿದ ಕೋಪ,ಆವರಿಸಿದ ಅಹಂಕಾರ, ಎಷ್ಟೊಂದು ಪದವಿ,ಎಷ್ಟೊಂದು ದುಡಿಮೆ,ಸಂಬಂಧಿಗಳೆದುರಿನ ಹಾರಾಟ,ಕೊನೆಗೆ ಹೋಗುವ ದಿನ ಬಂತು, ಆದರೆ ಜೊತೆಗೆ ಒಯ್ಯುವುದು,ಏನನ್ನು?
ನಾವು ಗಳಿಸಿದ ಪಾಪ ಪುಣ್ಯಕರ್ಮಗಳನ್ನೆ ಇನ್ನೇನೂ ಇಲ್ಲ..
ಮತ್ತೇಕೆ ಈ ಸೊಕ್ಕು?ಮತ್ತೇಕೆ ಈ ಮೋಹ?ಯೋಚಿಸು ಮನುಜ, ಇದು ನನ್ನೊಬ್ಬದೇ ಅಲ್ಲ..
ನಿನ್ನ ಬೆಲೆಯೂ ಇಷ್ಟೇ..
ಸಂಗ್ರಹ :ಹರೀಶ್ ಕಾಂಚನ್,ಉಪನ್ಯಾಸಕರು, ಕುಂದಾಪುರ