ಕುಂದಾಪುರ (ಮೇ ,22): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ & ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಗಳು ತೀರಾ ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಶಿಸ್ತುಬದ್ಧವಾಗಿ ಸಮ್ಮರ್ ಕ್ಯಾಂಪ್ ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಹರ್ಷೋದ್ಗಾರ, ಅಭಿಮಾನ ಮತ್ತು ಅಭಿನಂದನೆಯೊಂದಿಗೆ 10 ದಿನಗಳ “ಪ್ಯಾಟಿ ಮಕ್ಕಳ್ ಹಳ್ಳಿ ಟೂರ್” ಸಮ್ಮರ್ ಕ್ಯಾಂಪ್ ಸಂಪನ್ನಗೊಂಡಿತು.
ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲಾ ಬಗೆಯ ಮಕ್ಕಳೊಂದಿಗೆ ಕಲೆತು ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವು ಆಗುತ್ತದೆ. ಜೊತೆಗೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣವಾಗಲು ಸಮ್ಮರ್ ಕ್ಯಾಂಪ್ ಗಳು ಸಹಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಅನುಭವದೊಂದಿಗಿನ ಕಲಿಕೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂಬ ಮೂಲ ತತ್ವದಡಿಯಲ್ಲಿ ಕಲಿಕಾನುಭವದ ವಿಭಿನ್ನ ಆಯಾಮವನ್ನು ಶಿಬಿರದಲ್ಲಿ ಆಯೋಜಿಸಲಾಗಿತ್ತು. ಮಕ್ಕಳು ಬೇಸಿಗೆ ರಜೆಯನ್ನು ಕೇವಲ ಟಿವಿ, ಮೊಬೈಲ್, ವಿಡಿಯೋ, ಗೇಮ್ ಗಳಲ್ಲಿ ಕಳೆಯುವ ಬದಲಿಗೆ, ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳು, ಸ್ವಕಲಿಕೆಯ ಪರಿಚಯ ಹಾಗೆಯೇ ಮಗುವಿನ ನಿಜವಾದ ವಿಕಾಸದ ವೇದಿಕೆ ಆಗಲು ಸಾಧ್ಯವಾಯಿತು ಈ ಬೇಸಿಗೆ ಶಿಬಿರ.
ಕ್ಯಾಂಪ್ ನ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಪರಿಕಲ್ಪನೆಯಲ್ಲಿಯೇ ನೆರವೇರಿತು. ಕಲಿಕೆ ಒಂದು ಸಮಗ್ರವಾದ, ಆನಂದದಾಯಕವಾದ ಮತ್ತು ಕ್ರಿಯಾಶೀಲವಾದ ಚಟುವಟಿಕೆಯಾಗಿರಬೇಕು ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ಪ್ರತಿದಿನವೂ ಸಂತಸದ ಕಲಿಕೆಗೆ ಅವಕಾಶ ಕಲ್ಪಿಸಿದ್ದು ನಮ್ಮ ಶಿಬಿರದ ವಿಶೇಷತೆಯಾಯಿತು. ಕೃಷಿ ಹಾಗೂ ಕೃಷಿ ಸಂಬಂಧಿತ ಶಿಕ್ಷಣವನ್ನು ಉತ್ತೇಜಿಸಲು ಗೋಶಾಲೆ, ಧರಣಿ ಮಂಡಲ, ಕೃಷಿ ಕೇಂದ್ರಕ್ಕೆ ಭೇಟಿ, ದೇಶಿ ಆಟಗಳು, ಹಳ್ಳಿಯ ಸಾಂಪ್ರದಾಯಿಕ ಅಡುಗೆ, ಗದ್ದೆ ಬಯಲು, ತೋಟ ಮನೆ ಇವೆಲ್ಲವನ್ನು ಸಮ್ಮರ್ ಕ್ಯಾಂಪ್ನ ಭಾಗವಾಗಿಸಿಕೊಂಡಿದ್ದು ಮತ್ತೊಂದು ವಿಶೇಷತೆ. ನಮ್ಮ ಶಿಬಿರಾರ್ಥಿಗಳು ರೈಲು ಪ್ರಯಾಣ, ಸೋಮೇಶ್ವರ ಬೀಚ್, ಕೆರಾಡಿ ದರ್ಶನ, ಮೆಕ್ಕೆ ಕಟ್ಟು, ಉರು ಸಾಲು ಹೀಗೆ ನಾನಾ ಭಾಗಗಳಿಗೆ ಪ್ರವಾಸ ಕೈಗೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯ, ಕಲೆ, ವಾಸ್ತುಶಿಲ್ಪದ ಜ್ಞಾನವನ್ನು ಪಡೆದುಕೊಂಡರು.
ಮಾತೃಭಾಷಾ ಶಿಕ್ಷಣಕ್ಕೆ ಎನ್.ಇ.ಪಿ ಮಹತ್ವ ಕೊಟ್ಟರೆ, ನಮ್ಮ ಬೇಸಿಗೆ ಶಿಬಿರದ ಶೀರ್ಷಿಕೆ “ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ “ತಿರ್ಗ್ತಾ ತಿರ್ಗ್ತಾ ಕಲಿಯೋದು ನಮ್ಮ ಕುಂದಾಪುರ ಕನ್ನಡದ ಭಾಷೆಯಲ್ಲೇ ಸಂಪೂರ್ಣ ಶಿಬಿರ ನಡೆಯಿತು. ನಮ್ಮ ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ಕಲೆ, ರಂಗಕಲೆ, ಕ್ರಾಫ್ಟ್, ಕ್ಲೇ ಮಾಡೆಲ್, ಆಟೋಟ ಮುಂತಾದ ಹತ್ತು ಹಲವು ಚಟುವಟಿಕೆ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಯಿತು. ಸಾವಯವ ಗೊಬ್ಬರ ತಯಾರಿಕ ಘಟಕ, ಮಸಾಲಾ ತಯಾರಿಕ ಘಟಕ, ರೋಪ್ ಮೇಕಿಂಗ್ ಕೈಗಾರಿಕೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕೈಗಾರಿಕೆಗಳ ಬಗ್ಗೆ ಆಸಕ್ತಿ ಹೆಚ್ಚಿಸುವಂತೆ ಮಾಡುವುದರ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯ ಧ್ಯೇಯಗಳನ್ನು ಸಾಕಾರಗೊಳಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕಿ ರೇಖಾ ಕೆ.ಯು ಅವರ ನೇತೃತ್ವದ ಗಾಯತ್ರಿ, ಸ್ವಪ್ನ, ಕವಿತಾ, ವೀರೇಂದ್ರ, ಶ್ರೀನಿವಾಸ್, ವಿದ್ಯಾ, ದಿವ್ಯ ಎನ್, ದಿವ್ಯ ಎಚ್ ಇವರನ್ನು ಒಳಗೊಂಡ ತಂಡ ಸಂಸ್ಥೆಯ ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ.ಎನ್, ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಪ್ರಾರ್ಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ. ಜಿ. ಭಟ್, ಸಹಾಯಕ ಮುಖ್ಯ ಶಿಕ್ಷಕಿ ಆರತಿ ಶೆಟ್ಟಿ, ಹಾಗೂ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರ ಸಹಯೋಗ ಈ ಶಿಬಿರವನ್ನು ಅಪೂರ್ವಗೊಳಿಸಿತು.
ಮೊದಲ ಪ್ರಯತ್ನದಲ್ಲೇ ಅದ್ಭುತ ಯಶಸ್ಸನ್ನು ಕಂಡು ಕುಂದಾಪುರದ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದ ವಿದ್ಯಾರ್ಥಿ ಸ್ನೇಹಿ, ಪರಿಸರ ಸ್ನೇಹಿ ಶಿಬಿರದ ಯಶಸ್ಸು ಸಂಸ್ಥೆಯ ಸಂಚಾಲಕರು ಶ್ರೀ ಬಿ. ಎಂ ಸುಕುಮಾರಶೆಟ್ಟಿ ಹಾಗೂ ಆಡಳಿತ ಮಂಡಳಿಯ ಮೆಚ್ಚುಗೆಗೆ ಸಾಕ್ಷಿಯಾಯಿತು.