ಕಾರ್ಕಳ(ಆ,10): ಕಳೆದ ಮೇ ತಿಂಗಳಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶ ಆರಂಭಗೊಂಡಿದ್ದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಕೆ ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೆರಿಯ ಜಿಪ್ಮರ್ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.
ದೇಶಾದ್ಯಂತ ಇಪ್ಪತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ (JIPMER) ನಲ್ಲಿ ಪ್ರವೇಶ ಪಡೆಯುವುದು ಅಸಾಮಾನ್ಯ ಸಾಧನೆಯಾಗಿದೆ. ಕು. ಜಾಗೃತಿ ಕೆ ಪಿ ನೀಟ್ ಪರೀಕ್ಷೆಯಲ್ಲಿ 661 ಅಂಕ ಗಳಿಸುವುದರ ಮೂಲಕ ಜಿಪ್ಮರ್ (JIPMER) ನಂತಹ ಉನ್ನತ ವಿದ್ಯಾಲಯದಲ್ಲಿ ದೇಶದಲ್ಲಿಯೇ ಕೇವಲ 243 ಸೀಟ್ಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಹಾಗೂ ಕ್ರಿಯೇಟಿವ್ ಕಾಲೇಜಿನ ಇನ್ನೋರ್ವ ಪ್ರತಿಭಾವಂತ ವಿದ್ಯಾರ್ಥಿ ಉದ್ಭವ್ ಎಂ ಆರ್ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾ ಸಂಸ್ಥೆಯಾದ ಏಮ್ಸ್ (AIIMS) ನಾಗ್ಪುರ ದಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಒಟ್ಟು 2046 ಸೀಟ್ ಗಳಿರುವ ಏಮ್ಸ್ ನಲ್ಲಿಯೂ ಪ್ರವೇಶ ಪಡೆದುಕೊಂಡಿರುವುದು ಅಪ್ರತಿಮ ಸಾಧನೆಯಾಗಿದೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಿರಂತರವಾಗಿ ನಡೆಯುವ ನೀಟ್ ತರಬೇತಿ ಪಡೆದ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ದೇಶದ ಇನ್ನೂ ಅನೇಕ ವೈದ್ಯಕೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಳಿಸಿದ್ದಾರೆ. ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾಗಳ ವೈದ್ಯಕೀಯ ವಿದ್ಯಾಲಯಗಳಲ್ಲಿ ಸೀಟು ಪಡೆಯಲು ಕ್ರಿಯೇಟಿವ್ ನ ಅನೇಕ ವಿದ್ಯಾರ್ಥಿಗಳು ಪ್ರಥಮ ಹಂತದ ಕೌನ್ಸ್ಲಿಂಗ್ ನಲ್ಲಿದ್ದಾರೆ. ಕಳೆದ ವರ್ಷವೂ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುತ್ತಾರೆ.
ಸಂಸ್ಥೆ ಪ್ರಾರಂಭವಾದ ಎರಡೇ ವರ್ಷಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆಗೈದಿದೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗಾಗಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಸಂಯೋಜಕರಾದ ಲೋಹಿತ್ ಎಸ್ ಕೆ ಅಭಿನಂದಿಸಿದ್ದಾರೆ.