ಮೂಡ್ಲಕಟ್ಟೆ (ಆ,13): ಇಲ್ಲಿನ ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ನೂತನ ವಿದ್ಯಾರ್ಥಿಗಳಿಗೆ 12 ದಿನದ ದೀಕ್ಷಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಥಮ ದಿನವಾದ ಇಂದು ದೀಪ ಬೆಳಗಿಸುವುದರ ಮೂಲಕ ಹಾಗೂ ವಿದ್ಯಾರ್ಥಿಗಳು ಹಣತೆಯನ್ನ ಹಚ್ಚುವ ಮೂಲಕ ವಿಭಿನ್ನವಾಗಿ ಪದವಿ ಜೀವನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳಿಗೆ ದೀಕ್ಷೆಯನ್ನು ತೊಡಿಸಲಾಯಿತು.
ಇದೇ ಸಂದರ್ಭದಲ್ಲಿ ಐ ಎಂ ಜೆ ಶಿಕ್ಷಣ ಸಂಸ್ಥೆಯ ಪ್ರಾರ್ಥನೆಯ ಧ್ವನಿ ಮುದ್ರಣವನ್ನು ಗಣ್ಯರಿಂದ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಿರಿಯ ವಕೀಲರು ಲೇಖಕ ಮತ್ತು ಭಾಷಣಕಾರರಾದ ಶ್ರೀ ಎ. ಎಸ್ ಎನ್ ಹೆಬ್ಬಾರ್ ಅವರು “ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯು ಅತ್ಯಂತ ಶ್ರೇಷ್ಠವಾದದ್ದು, ನಮ್ಮ ಪೂರ್ವಿಕರು ಪ್ರಪಂಚದ ಇತರ ದೇಶಗಳಿಗಿಂತ ಮುಂಚೆ ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನ ಪಡೆದಿದ್ದರು” ಎಂಬುದನ್ನು ಉದಾರಣೆಗಳ ಮೂಲಕ ತಿಳಿಸುತ್ತಾ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸಿದರು.
ಕಾರ್ಯಕ್ರಮದ ಮತ್ತೊರ್ವ ಅತಿಥಿಯಾದ ವೆಲ್ಕಮ್ ಗ್ರೂಪ್ ಗ್ರ್ಯಾಜುವೇಟ್ ಸ್ಕೂಲ್, ಹೋಟೆಲ್ ಎಡ್ಮಿನಿಸ್ಟ್ರೇಷನ್ ಮಾಹೆ ಮಣಿಪಾಲ ಇಲ್ಲಿನ ಪ್ರೊಫೆಸರ್ ಡಾ. ರಾಜಶೇಖರನ್ ಪಿಳ್ಳೆಯವರು “ಆಧುನಿಕ ಹೊಸ ಹೊಸ ತಂತ್ರಜ್ಞಾನದ ಜೊತೆಗೆ ನಾವು ಕೂಡ ವೇಗವಾಗಿ ಬೆಳೆಯಬೇಕು, ವಿದ್ಯಾರ್ಥಿಗಳು ಹಣದ ಬೆಲೆ ಅರಿತು ಸ್ವಾಭಿಮಾನದ ಬದುಕನ್ನು ಈ ಹಂತದಲ್ಲಿ ಅಳವಡಿಸಿಕೊಳ್ಳಬೇಕು ಹೆತ್ತವರು ವಿದ್ಯಾರ್ಥಿಗಳಿಗೆ ಕನ್ನಡಿ ಇದ್ದಂತೆ ಅವರ ಅನುಭವ ಮಕ್ಕಳಿಗೆ ದಾರಿದೀಪವಾಗಬೇಕು. ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಾಗ ಈ ಅನುಭವಗಳನ್ನು ನೆನಪಿನಲ್ಲಿಟ್ಟರೆ, ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಯ ಸೂಪ್ತ ಪ್ರತಿಭೆಯನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐ ಎಂ ಜೆ ಸಮೂಹ ಶಿಕ್ಷಣ ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಹೆಗಡೆಯವರು”ಸಂಸ್ಥೆ ಮತ್ತು ಉಪನ್ಯಾಸಕರಿಂದ ಅತ್ಯುತ್ತಮವಾದ ಶಿಕ್ಷಣವನ್ನು ಪಡೆದು ಸಂಸ್ಥೆಗೆ ಹೆಮ್ಮೆ ತರಬೇಕು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ. ಎಂ ಪಟೇಲ್ “ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುವ ಗುರಿ ನಮ್ಮದಾಗಿದೆ ಆದರೆ ವಿದ್ಯಾರ್ಥಿಗಳಾದ ನೀವು ಸತತ ಪರಿಶ್ರಮ, ಶ್ರದ್ಧೆಯಿಂದ ಅದನ್ನು ಸಾಧಿಸಬೇಕು” ಎಂದು ಶುಭ ಹಾರೈಸಿದರು.
ಉಪ ಪ್ರಾಂಶುಪಾಲ ಜಯಶೀಲ ಕುಮಾರ್ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಕು. ವೈಷ್ಣವಿ ಶೆಣೈ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀಮತಿ ರೇವತಿ ವಂದಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಕು. ರಕ್ಷಿತಾ ಅಡಿಗ ಕಾರ್ಯಕ್ರಮ ನಿರೂಪಿಸಿದರು.