ಕೋಟ(ಅ,10): “ಮಕ್ಕಳ ಮನಸ್ಸಿನಲ್ಲಿ ಕಲೆಯ ಬೀಜವನ್ನು ಬಿತ್ತಿದಾಗ ಅದು ಸಾರ್ಥಕವಾಗಿ ಮುಂದೆ ಕಲಾ ಶ್ರೀಮಂತಿಕೆಯನ್ನು ಮೆರೆಯುವುದುಕ್ಕೆ ಸಾಧ್ಯವಾಗುತ್ತದೆ. ಆದಷ್ಟು ಹೆಚ್ಚು ಹೆಚ್ಚು ಮಕ್ಕಳನ್ನು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿ, ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಬೆಳೆಸಿ, ಸಾಂಪ್ರದಾಯಿಕ ರಂಗ ಪ್ರದರ್ಶನದೊಂದಿಗೆ ಐವತ್ತು ವರ್ಷಗಳ ಕಾಲ ಮುನ್ನೆಡಿಸಿದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಸಾಧನೆ ಅಪೂರ್ವವಾದುದು. ಅದೆಷ್ಟೋ ಮಕ್ಕಳು ಈ ತಂಡದಿಂದ ಕಲಾವಿದರಾಗಿ, ಕಲಾಭಿಮಾನಿಗಳಗಿ ಹೊರಬಂದಿದ್ದಾರೆ.
ಮೇಳವನ್ನು ಈಗಲೂ ಮುನ್ನೆಡೆಸುತ್ತಿರುವ ಈಗಿನ ನಿರ್ದೇಶಕರ ಸಾಹಸ ಶ್ಲಾಘನೀಯವಾದುದು. ಸುವರ್ಣ ಪರ್ವವನ್ನು ಆಚರಿಸುತ್ತಿರುವ ಮಕ್ಕಳ ಮೇಳದ ಯಕ್ಷ ರಥವು ಸಾಗುತ್ತ ಸಾಗುತ್ತಾ ಶತಕದತ್ತ ಯಶಸ್ವಿಯಾಗಿ ಸಾಗಲಿ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
2024 ರ ಅಕ್ಟೋಬರ್ 10 ಗುರುವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಪ್ರವಚನ ಮಂದಿರದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ, ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸಂಭ್ರಮ ‘ಸುವರ್ಣ ಪರ್ವ’ವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದರು. ತಾಳಮದ್ದಳೆಯ ಖ್ಯಾತ ಅರ್ಥಧಾರಿ, ಸಂಘಟಕ ಉಜಿರೆ ಅಶೋಕ ಭಟ್ಟರು ಆಶಯ ನುಡಿಗಳಾನ್ನಾಡಿದರು. ಮಕ್ಕಳ ಮೇಳ ಟ್ರಸ್ಟ್ನ ಕಾರ್ಯಾಧ್ಯಕ್ಷರಾದ ಕೆ. ಮಹೇಶ್ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಮಕ್ಕಳ ಮೇಳದ ಮೊದಲ ವರ್ಷದ ಕಲಾವಿದ ಮೋಹನದಾಸ ಶಾನುಭಾಗ್ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ಸಾಲಿಗ್ರಾಮ ರಾಘವೇಂದ್ರ ನಾಯಿರಿ ಸ್ವಾಗತಿಸಿದರು. ಕುಮಾರಿ ಕಾವ್ಯ ವಂದಿಸಿದರು. ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಪರ್ವದ ಅಂಗವಾಗಿ ನವರಾತ್ರಿಯ ಶುಭಾವಸರದಲ್ಲಿ ಮಕ್ಕಳ ಮೇಳದ ಕಲಾವಿದರಿಂದ ಹೂವಿನಕೋಲು ಪ್ರದರ್ಶನ ನಡೆಯಿತು.