ಕುಂದಾಪುರ,(ಮೇ,10) : ಕುಂದಾಪುರ ಎಜುಕೇಶನ್ ಸೊಸೈಟಿ( ರಿ) ಎಚ್. ಎಂ. ಎಂ. ಮತ್ತು ವಿ. ಕೆ. ಆರ್. ಶಾಲೆಗಳಲ್ಲಿ 2024- 25 ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ರ್ಯಾಂಕ್ ಗಳಿಕೆಗೆ ಪ್ರೋತ್ಸಾಹಿಸಿದ ಆಡಳಿತ ಮಂಡಳಿ ಮತ್ತು ಶಿಕ್ಷಕರ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ ಮತ್ತು ಕಾರ್ಯದರ್ಶಿ ಶ್ರೀ ಕೆ. ಸೀತಾರಾಮ ನಕ್ಕತಾಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಭಿವಂದಿಸಿ ಸಾಧಕರ ಪೋಷಕರಿಗೂ ಅಭಿನಂದಿಸಿದರು.
ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಾರಾಯಣ ನಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾಕ್ಟರ್ ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಪ್ರಾಂಶುಪಾಲೆ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಆಚಾರ್, ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕರಾದ ಸುರೇಂದ್ರ ಶೆಟ್ಟಿ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.