ಕುಂದಾಪುರ (ಮೇ 21): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಮಾನ ಅವಕಾಶ ಘಟಕದ ಆಶ್ರಯದಲ್ಲಿ “ಸಾಮಾಜಿಕ ನ್ಯಾಯ ಮತ್ತು ಭದ್ರತೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಮೇ 21ರಂದು ಕಾಲೇಜಿನ ಎ.ವಿ. ಹಾಲ್ನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿ ಕುಂದಾಪುರದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಮೇಶ್ ಕುಲಾಲ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳು, ವಿದ್ಯಾರ್ಥಿವೇತನಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭ ಅವರು ಸರ್ಕಾರಿ ಉದ್ಯೋಗಾವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ವಿದ್ಯಾರ್ಥಿಗಳು ತಮ್ಮ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಂವಿಧಾನಾತ್ಮಕ ಮೌಲ್ಯಗಳನ್ನು ರೂಢಿಸಿಕೊಂಡು, ವಿಶ್ವಾತ್ಮಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ ಎಂದರು. ಸಮಾನ ಅವಕಾಶ ಘಟಕದ ಸಂಯೋಜಕರಾದ ಶ್ರೀ ಮಹೇಶ್ ನಾಯ್ಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಇನ್ನೋರ್ವ ಸಂಯೋಜಕರಾದ ಮೇಘಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಹಾಸ್ ವಿ. ಮಲ್ಯ ಪ್ರಾರ್ಥಿಸಿ, ಮಿಥಿಲೇಶ್ ಅತಿಥಿಗಳನ್ನು ಪರಿಚಯಿಸಿ, ರಕ್ಷಿತ್ ಶೆಟ್ಟಿ ವಂದಿಸಿ, ಸಮರ್ಥ್ ಕಾರ್ಯಕ್ರಮ ನಿರೂಪಿಸಿದರು.










