ಹೆಬ್ರಿ (ಜೂ,04):ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು “ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಜರಗಿತು.
ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ಮಾಡುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಅವುಗಳ ಜೀವನ ದುಸ್ತರವಾಗುವಂತಾಗಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳುಗೆಡಹುವ ಕಾರ್ಯ ಬಿಟ್ಟು ಸಾಧ್ಯವಾದಷ್ಟು ಪರಿಸರದ ಸ್ವಚ್ಛತೆಗೆ ಆದ್ಯತೆಯಾಗುವಂತೆ ಬದುಕಬೇಕಾಗಿದೆ ಎಂದು ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಹೇಳಿದರು.
ನಾವು ಶಿಕ್ಷಿತರಾದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ನಾವು ಬಳಸಿದ ತ್ಯಾಜ್ಯ ವಸ್ತುಗಳನ್ನು, ಕಸ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಜವಾಬ್ದಾರಿಯಿಲ್ಲದೇ ಕಂಡಲ್ಲಿ ಎಸೆಯುತ್ತಿದ್ದೇವೆ. ಅದು ಕಾಡಿನ ಪರಿಸರವನ್ನು ಮಾಲಿನ್ಯಗೊಳಿಸಿ ಅಲ್ಲಿನ ಪ್ರಾಣಿಪಕ್ಷಿಗಳಿಗೂ ತೊಂದರೆಯುಂಟುಮಾಡುತ್ತಿದೆ. ಆದ್ದರಿಂದ ಪ್ರವಾಸಿ ಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಂತ ಕಾಳಜಿಯಿಂದ ನಿರ್ಮಲವಾಗಿಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಎನ್ ಎಸ್ ಎಸ್ ನ ಯೋಜನಾಧಿಕಾರಿಯಾದ ಶ್ರೀ ಉಮೇಶ್ ಕರೆ ನೀಡಿದರು.
ಶಿರ್ಡಿ ಡಿಗ್ರಿ ಕಾಲೇಜಿನ ಆಶೀಶ್ ಶೆಟ್ಟಿ ಮಾತನಾಡಿ ಪ್ರತಿಯೊಬ್ಬರಿಗೂ ಸಾಮಾಜಿಕ ಪ್ರಜ್ಞೆಯಿರಬೇಕು. ಕೊಳಕು ಮಾಡುವ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಬದುಕಿ ಬಾಳುವ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕಾದ ಅನಿರ್ವಾಯತೆಯಿದೆ. ಪರಿಸರ ಪ್ರೀತಿ ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ಆಗುಂಬೆಯ ಘಾಟಿಯ ಆರಂಭದಿಂದ ಸೋಮೇಶ್ವರದ ವರೆಗೆ ಕ್ರಿಯೇಟಿವ್ ಕಾಲೇಜು ಹಾಗೂ ಶಿರ್ಡಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನೇರವೇರಿಸಿದರು. ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ಶ್ರೀಮತಿ ಶ್ರೀನಿಧಿ, ಪ್ರಿಯಾಂಕ, ತಿಪ್ಪೇಸ್ವಾಮಿ, ಶಶಿಧರ ಭಟ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಹರೀಶ್, ಚ್ರೈತ್ರಾ, R.F.O ಗೌರವ್ ಹಾಗೂ ಅರಣ್ಯಾಧಿಕಾರಿಗಳು ಮತ್ತು ಶಿರ್ಡಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.