ಗಂಗೊಳ್ಳಿ (ಜೂ,11) : ಜ್ಞಾನಾರ್ಜನೆ ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಬೇಕು. ಆ ನಿಟ್ಟಿನಲ್ಲಿ ಶ್ರದ್ಧೆ ಪ್ರಮಾಣಿಕತೆ ಛಲದೊಂದಿಗೆ ಸಾಗಿದಾಗ ಜೀವನದಲ್ಲಿ ಅದ್ಭುತ ಯಶಸ್ಸನ್ನು ಕಾಣಲು ಸಾಧ್ಯ ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೆಷನ್ ಕಾರ್ಯದರ್ಶಿ ಹೆಚ್.ಗಣೇಶ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಸಂಸ್ಕøತ ಉಪನ್ಯಾಸಕ ವೆಂಕಟೇಶ ಮೂರ್ತಿ ಎನ್.ಸಿ. ಕಾಲೇಜಿನ ಶಿಸ್ತು ನೀತಿ ನಿಯಮಗಳ ಕುರಿತು ಮಾತನಾಡಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾಲೇಜು ಕಛೇರಿಯ ದ್ವಿತೀಯ ದರ್ಜೆ ಸಹಾಯಕಿ ಪ್ರಮೋದ ಪೈ. ಎಮ್. ಜಿ. ಕಛೇರಿ ಸೌಲಭ್ಯಗಳು ಮತ್ತು ವಿದ್ಯಾರ್ಥಿ ವೇತನದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆರು ನೂರಕ್ಕು ಆಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಬಾಷಾ ಉಪನ್ಯಾಸಕ ಥಾಮಸ್ ಪಿ.ಎ ಸಿಬ್ಬಂದಿ ವರ್ಗದವರನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಭಟ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಪ್ರತಿನಿಧಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದ ನೇಹಾ ಎಸ್ ಕೊಡೇರಿ ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕ ನಾರಾಯಣ ಈ ನಾಯ್ಕ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಪವಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ಉಪನ್ಯಾಸಕ ಭಾಸ್ಕರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿನಿಸು ವಿತರಿಸಲಾಯಿತು.
ವರದಿ : ನರೇಂದ್ರ ಎಸ್ ಗಂಗೊಳ್ಳಿ