ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಕೆರಾಡಿ ಎನ್ನುವ ಹಳ್ಳಿಯೊಂದರಲ್ಲಿ ಚಿತ್ರೀಕರಣಗೊಂಡು, ಅದೇ ಹಳ್ಳಿಗರ ಮನೆಮಗ ಸ್ಯಾಂಡಲ್ ವುಡ್ ನ ಖ್ಯಾತ ನಟ -ನಿರ್ದೇಶಕ ರಿಷಬ್ ಶೆಟ್ಟಿಯವರು ನಾಯಕನಾಗಿ ನಟಿಸಿರುವ ಹಾಗೂ ಕೆ.ಜಿ.ಫ್ ಖ್ಯಾತಿಯ ಹೊಂಬಾಳೆ ಫಿಲ್ಸಂ ರವರ ನಿರ್ಮಾಣದಲ್ಲಿ ಮೂಡಿ ಬಂದ ಕಾಂತಾರ ಚಿತ್ರ ಕನ್ನಡದ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಸ್ರಷ್ಠಿಸಿದೆ.
ದೈವಾರಾಧನೆಯ ಜೊತೆಗೆ ಭೂ ಮಾಲೀಕತ್ವದ ಸಂಘರ್ಷದೊದಿಗೆ ಹೆಣೆದು ಕೊಂಡಿರುವ ಸಿನೆಮಾದ ಕಥೆ ತುಳುನಾಡು ಮತ್ತು ಕರಾವಳಿ ಕರ್ನಾಟಕದ ದೈವಾರಾಧನೆಯ ಮಹಿಮೆಯ ಜೊತೆಗೆ ಗ್ರಾಮೀಣ ಭಾಗದ ಜನರ ಜನಪದೀಯ ಬದುಕನ್ನು ಚಿತ್ರ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದೆ. ಮೀಸಲು ಅರಣ್ಯ ನೆಪದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಳ್ಳಿಯ ಮುಗ್ದ ಜನರಿಗೆ ಒಕ್ಕಲೆಬ್ಬಿಸುವ ನೆಪದಲ್ಲಿ ನೀಡುವ ಕಿರುಕುಳ, ಊರ ಜಮೀನ್ದಾರನ ಪಿತೂರಿಯ ನಡುವೆ ದೈವಾರಾಧನೆಯ ಕಾರಣೀಕತೆ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದ್ದು ಯುವ ಹಾಗೂ ಸ್ಥಳೀಯ ಪ್ರತಿಭೆಗಳ ದೊಡ್ಡ ದಂಡೆ ಇದೆ .ಹಿನ್ನೆಲೆ ಸಂಗೀತ , ಸಿನೆಮಾ ಸೆಟ್ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವಂತದೆ.
ಪ್ರಥಮಾರ್ಧದಲ್ಲಿ ಸನ್ನಿವೇಶಗಳು ಪುನರಪಿಯಾಗಿ ಕಂಡುಬಂದರೂ ಪ್ರೇಕ್ಷಕರ ಮನರಂಜಿಸುವಲ್ಲಿ ಚಿತ್ರತಂಡ ಎಲ್ಲಿಯೂ ಸೋತಿಲ್ಲ. ನಟ ಕಿಶೋರ್ ರವರ ಖಡಕ್ ಪೋಲಿಸ್ ಗಿರಿ, ನಾಯಕ ನಟ ರಿಷಬ್ ರವರ ಒರಟುತನ, ಚಿತ್ರದ ನಾಯಕಿ ಸಪ್ತಮಿ ಗೌಡರ ಮುಗ್ದತೆ , ಒಂದಿಷ್ಟು ಹಾಸ್ಯ ,ಒಂದಿಷ್ಟು ಪ್ರೀತಿ ,ಒಂದಿಷ್ಟು ಬೈಗುಳ ,ಗ್ರಾಮ್ಯ ಭಾಷೆ, ನೆಲಪರ ಆಚರಣೆಗಳು ಹೀಗೆ ಚಿತ್ರ ಗ್ರಾಮೀಣ ಜನರ ಬದುಕನ್ನು ತೆರೆಯ ಮೇಲೆ ಅನಾವರಣಗೊಳಿಸುತ್ತಾ ಹೋಗುತ್ತದೆ.
ಮಧ್ಯಂತರದ ನಂತರ ಚಿತ್ರ ಸಾಗಿಬಂದ ಪರಿ ಅಧ್ಬುತ… ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿಯವರ ಮೈ- ಮನಸ್ಸನ್ನು ಆವರಿಸುವ ದೈವ ಮತ್ತು ಆವೇಶದ ಸನ್ನಿವೇಶ ಇಡೀ ಚಿತ್ರಮಂದಿರದಲ್ಲಿನ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ್ದು ಸುಳ್ಳಲ್ಲ. ನ್ಯಾಯ,ಸತ್ಯ, ಧರ್ಮದಿಂದ ಪ್ರಾಮಾಣಿಕವಾಗಿ ಬದುಕುವವರಿಗೆ ದೈವ ಯಾವತ್ತೂ ಕೈ ಬಿಡುವುದಿಲ್ಲ ಎಂದು ಅಭಯ ನೀಡುವ ದ್ಯಶ್ಯ ಪ್ರೇಕ್ಷಕನ ಮೈ ಮನದಲ್ಲಿ ವೈಬ್ರೇಷನ್ ಸ್ರಷ್ಠಿಸಿರುವುದು ಅಧ್ಭುತ….
ಕನ್ನಡ ಚಿತ್ರರಂಗದ ಒಂದೊಳ್ಳೊ ಸಿನೆಮಾ ಕಾಂತಾರ ಕರಾವಳಿಯ ಕಂಪನ್ನು ದೇಶ ಭಾಷೆಯ ಗಡಿದಾಟಿ ಪಸರಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ .. ಒಮ್ಮೆ ಸಿನೆಮಾ ನೋಡಿ …….. ಕಾಂತಾರ…..ಇದು ದೈವಲೀಲೆಯ ಅವತಾರ…..
ಸಿನೆಮಾ ವಿಮರ್ಶೆ : ಪ್ರವೀಣ ಗಂಗೊಳ್ಳಿ