ಕುಂದಾಪುರ( ನ,19 ): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ) ಕುಂದಾಪುರ ದಶಮ ಸಂಭ್ರಮ – 2022 ರ ಪ್ರಯುಕ್ತ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದ ಬೇರೆ ಬೇರೆ ಅಹ್ವಾನಿತ ತಂಡಗಳ ಬೃಹತ್ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಎಂ. ಭಾಸ್ಕರ್ ಪೈ ಸರ್ಕಾರಿ ಪ್ರೌಢಶಾಲೆ ಗುಜ್ಜಾಡಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಯವರು ಸಂಘದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
17 ವರ್ಷಗಳ ಸುದೀರ್ಘಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ರಾಜ್ಯ, ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾಟದ ತೀರ್ಪುಗಾರರಾಗಿ, ಕುಂದಾಪುರ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ರೆಫ್ರಿ ಬೋರ್ಡ್ ನ ಚೇರ್ಮನ್ ಆಗಿ ಕಾರ್ಯನಿರ್ವಹಿಸಿರುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೇರೆ ಬೇರೆ ಸಂಘ-ಸಂಸ್ಥೆಗಳ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ್ದಲ್ಲದೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಇವರದ್ದು.
ಬಂಟ ಸಮುದಾಯದ ಯುವಕ ಯುವತಿಯರನ್ನು ಒಳಗೊಂಡಂತೆ ವಯೋವೃದ್ದರವರೆಗಿನ ಎಲ್ಲಾ ವಯೋಮಾನದ ಕ್ರೀಡಾಸಕ್ತರು ಒಗ್ಗೂಡಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬಾರಿ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ಅಥ್ಲೆಟಿಕ್ಸ್ ಜೊತೆಗೆ ಮಕ್ಕಳಿಗಾಗಿ ವಿವಿಧ ಮನೋರಂಜನಾ ಆಟದ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುವುದು ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.