ಸಂಸ್ಕಾರ ಭಾರತೀಯ ಮುಖ್ಯಸ್ಥರು, ಸ್ನೇಹಜೀವಿ,ಅದ್ಭುತ ಕಲಾವಿದ, ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರೂ ಸದಾ ಎಲ್ಲರೊಂದಿಗೆ ಬೆರೆಯುವ ಸಹಜ ಪ್ರೀತಿಯ ನಡೆನುಡಿಯ ಧೀಮಂತ ವ್ಯಕ್ತಿ ಶ್ರೀ ಕುಂಬ್ಳೆ ಸುಂದರ ರಾವ್ ಇನ್ನಿಲ್ಲ .
ಎಂಬತ್ತು -ತೊಂಬತ್ತರ ದಶಕದ ಸ್ಟಾರ್ ಕಲಾವಿದ. ಧರ್ಮಸ್ಥಳ ಮಂಜುನಾಥೇಶ್ವರ ಮೇಳದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ತನ್ನ ವಿಶಿಷ್ಟ ಪ್ರಾಸಬದ್ಧ ಮಾತಿನ ಶೈಲಿಯ ಮೂಲಕ ಯಕ್ಷಗಾನ ಮತ್ತು ತಾಳಮದ್ದಳೆ ಕೂಟಗಳಲ್ಲಿ ರಂಗೇರಿಸುತ್ತಿದ್ದ ಮೇರು ಕಲಾವಿದ. ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಚಟುವಟಿಕೆಯಿಂದಿದ್ದ ಕ್ರಿಯಾಸ್ಪೂರ್ತಿ ಚಿರಯುವಕ. ತನ್ನ ಎಂಬತ್ತೆಂಟರ ಹರೆಯದಲ್ಲಿ ತಂಬು ಯಶಸ್ವೀ ಜೀವನ ಯಾತ್ರೆ ಮುಗಿಸಿದ್ದಾರೆ. ನಮಗೆಲ್ಲ ಪ್ರೀತಿಯ “ಕುಂಬ್ಳೆ ಮಾಮ” ಆಗಿದ್ದವರು. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಲಭಿಸಲಿ ಅನ್ನೋ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ.
ಕುಂಬಳೆ ಸುಂದರ ರಾಯರು ಸುರತ್ಕಲ್ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ಹೇಳಿದ್ದು:
ನಾನು ಗೆದ್ದರೆ ಎಮ್ಮೆಲ್ಯೇಸೋತರೆ ನಿಮ್ಮಲ್ಯೇ.
ಅವರ ಮಾತುಗಳು ಹಾಗಿದ್ದವು, ಪ್ರಾಸಕ್ಕೇ ಪ್ರಸಿದ್ಧಿ. ಯಾರೋ ಸವಾಲು ಹಾಕಿದರು ಅಂತ ಕೆಲ ವರ್ಷ ಪ್ರಾಸ ಬಿಟ್ಟೇ ಮಾತನಾಡಿಯೂ ಇದ್ದರು. ಭಾವುಕ ಅರ್ಥಗಳು ಅವರದು. ವೈಚಾರಿಕ ತೀವ್ರತೆಗೆ ಆಸ್ಪದ ಕಡಿಮೆ. ಬಾಲ್ಯದಲ್ಲಿ ಬೆರಗುವಟ್ಟುಕೊಂಡು ಅವರ ವೇಷ ನೋಡಿದೆವು, ಮಾತು ಕೇಳಿದೆವು,ಕಲಾವಿದರಾದರೆ ಹೀಗೆ ಆಗಬೇಕು ಎಂದುಕೊಂಡೆವು. ಅವರ ಭರತ, ಗೋವಿಂದ ದೀಕ್ಷಿತ, ಚಾರ್ವಾಕ, ಕೃಷ್ಣ ನಮ್ಮ ಮನಸ್ಸನ್ನು ತುಂಬಿದವು. ಶೇಣಿಯಂಥಾ ಜಾಜ್ವಲ್ಯಮಾನ, ವಿಶ್ಲೇಷಣ ತೀವ್ರತೆಯ ಕಲಾವಿದ ಅರ್ಥಧಾರಿಯ ಕಾಲದಲ್ಲೂ ತಮ್ಮ ನೆಲೆ ಉಳಿಸಿಕೊಳ್ಳುವುದು ಸಣ್ಣ ಮಾತೇನಲ್ಲ!
ಅವರು ಬಿಟ್ಟು ಹೋದ ಪಾತ್ರಗಳು ನಮ್ಮನ್ನು ಪೊರೆಯಲಿ.
ಲೇಖನ :ಶ್ರೀಪತಿ ಆಚಾರ್ಯ