ಕುಂದಾಪುರ (ಜು,15): ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಉಡುಪಿ ಇವರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಬಡಗುತಿಟ್ಟು ಯಕ್ಷಗಾನ ಹೆಜ್ಜೆ ತರಬೇತಿ ಇದರ ಉದ್ಘಾಟನಾ ಸಮಾರಂಭ ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಸಂಸ್ಥೆಯ ಉಪ ಪ್ರಾಂಶುಪಾಲೆ ಶ್ರೀಮತಿ ಶುಭಾ ಕೆ. ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಕ್ಷ ಶಿಕ್ಷಣ ಟ್ರಸ್ಟ್ ಮತ್ತು ಕಲಾರಂಗ ಉಡುಪಿ ಇದರ ಕಾರ್ಯದರ್ಶಿಗಳಾದ ಮುರಳಿ ಕಡೇಕಾರ್ ಟ್ರಸ್ಟ್ ನ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ. ಅದು ನಿಮ್ಮ ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುತ್ತದೆ. ವಿದ್ಯಾರ್ಥಿ ಜೀವನವನ್ನು ಖುಷಿಯಿಂದ ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಆನಂದದ ಶಿಕ್ಷಣ ಪಡೆಯಿರಿ. ಅದು ಶಾಲೆಯಿಂದಲೇ ಆರಂಭವಾಗಬೇಕು. ಯಾವುದೇ ಜಾತಿ, ಮತ, ಧರ್ಮವಿಲ್ಲದೆ ಶ್ರದ್ಧೆಯಿಂದ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಮಾತನಾಡಿದರು.

ಪ್ರಸಿದ್ಧ ಮದ್ದಳೆ ವಾದಕರು ಮತ್ತು ಯಕ್ಷ ಗುರುಗಳಾದ ಎನ್. ಜಿ. ಹೆಗಡೆ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ತಾಳವನ್ನು ಹೇಳಿಸುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಯಕ್ಷ ಶಿಕ್ಷಣ ಟ್ರಸ್ಟ್ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮ್ ಭಟ್, ಸಂಸ್ಥೆಯ ಹಿರಿಯ ಶಿಕ್ಷಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಕೆ. ಪರಮೇಶ್ವರ ಉಡುಪ ಉಪಸ್ಥಿತರಿದ್ದರು. ಸಂಸ್ಥೆಯ ಸಹ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










