ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ಔಷಧಿಯನ್ನು ಕಂಡು ಹಿಡಿಯಲು ಶ್ರಮ ಪಟ್ಟಿರುವ ಭಾರತ ಸೀರಮ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದವರು ಕರಾವಳಿಯ ಕನ್ನಡಿಗರಾದ ಬಾಂಡ್ಯ ಶ್ರೀಕಾಂತ ಪೈ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿ ಮೂಲದ ದಿವಂಗತ ಬಾಂಡ್ಯ ಅಣ್ಣಪ್ಪ ಪೈ ಅವರ ಪುತ್ರ ಬಾಂಡ್ಯ ಶ್ರೀಕಾಂತ ಪೈ.
ಶ್ರೀಕಾಂತ ಪೈ ಯವರು ತಮ್ಮ ಈ ಸಾಧನೆಯ ಅನುಭವಗಳನ್ನು, ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ನಂತರವೂ ಅನೇಕರಲ್ಲಿ ಕಾಣಿಸಿಕೊಂಡಿರುವ ಬ್ಲ್ಯಾಕ್ ಫಂಗಸ್ (ಕಪ್ಪು ಶೀಲಿಂದ್ರ) ಕಾಯಿಲೆಯನ್ನು ವಾಸಿ ಮಾಡಲು ಬಳಸುತ್ತಿರುವ ಔಷಧಿಗಳಲ್ಲಿ ‘ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ಅತ್ಯಂತ ಪರಿಣಾಮಕಾರಿಯಾಗಿ ರಾಮಬಾಣದಂತೆ ಕೆಲಸ ಮಾಡುತ್ತಿದೆ. ‘ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ಎನ್ನುವ ಔಷಧಿಯನ್ನು ಅಭಿವೃದ್ಧಿಪಡಿಸಿರುವ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಿ.ಶ್ರೀಕಾಂತ ಪೈ ತಮ್ಮ ಅನುಭವಗಳನ್ನು, ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಶೀಲೀಂದ್ರ ಸೋಂಕಿನಿಂದ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದೆ.
ಇದು ಈಗ ಬ್ಲ್ಯಾಕ್ ಫಂಗಸ್ ಸಮಸ್ಯೆಯಿಂದ ಬಳಲುತ್ತಿರುವವರ ಜೀವರಕ್ಷಕದಂತೆ ಕೆಲಸ ಮಾಡುತ್ತಿದೆ. 60 ವರ್ಷಗಳಿಂದ ಶಿಲೀಂಧ್ರ ಸಮಸ್ಯೆ ನಿವಾರಣೆಗೆ ಅಮೇರಿಕಾ ಮೂಲದ ‘ಆ್ಯಂಪೋಟೆರಿಸಿನ್’ ಬಳಸುತ್ತಿದ್ದರು. ಆ್ಯಂಪೊಟೆರಿಸಿನ್ನ ಮೂಲ ಉತ್ಪಾದಕರು ಅಮೇರಿಕಾದ ಗಿಲಿಯಡ್ ಸೈನ್ಸಸ್ ಕಂಪೆನಿ. ಆದರೆ ಈ ಉತ್ಪನ್ನದ ಹಕ್ಕು ಸ್ವಾಮ್ಯ ಅವಧಿ 2008ರಲ್ಲಿ ಮುಕ್ತಾಯವಾಗಿತ್ತು. ಹಕ್ಕುಸ್ವಾಮ್ಯದ ಅವಧಿ ಮುಗಿದ ಮರುದಿನದಿಂದಲೇ ಯಾರೂ ಬೇಕಾದರೂ ಇಂತಹ ಉತ್ಪನ್ನವನ್ನು ತಯಾರಿಸಬಹುದು. ಆದರೆ ಭಾರತದಲ್ಲಿ ಇದನ್ನು ಉತ್ಪಾದಿಸುವ ತಂತ್ರಜ್ಞಾನ ಇರಲಿಲ್ಲ. 2008ರಲ್ಲಿ ಭಾರತದ ಉಪಯೋಗಕ್ಕೆ ಅದರ ಪೇಟೆಂಟ್ ಅವಧಿ ಮುಗಿಯುತ್ತಿತ್ತು. ಆದ್ದರಿಂದ ಅದರ ಸಾಧಕ ಬಾಧಕ ಗಮನಿಸಿ 2004ರಿಂದಲೇ ಹೊಸ ಔಷಧ ಸಂಶೋಧನೆಯಲ್ಲಿ ನಾವು ತೊಡಗಿದೆವು ಎಂದು ಬಿ.ಶ್ರೀಕಾಂತ್ ಪೈ ವಿವರಿಸಿದರು.
ಆ್ಯಂಪೊಟೆರಿಸಿನ್ ಉತ್ಪನ್ನದ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ಯಾವುದೇ ಮಾರ್ಗಸೂಚಿ ಇರಲಿಲ್ಲ. ಇದನ್ನು ಮತ್ತೆ ಉತ್ಪಾದಿಸಲು ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್ಡಿಎ) ಹಾಗೂ ಯೂರೋಪಿಯನ್ ಮೆಡಿಕಲ್ ಏಜೆನ್ಸಿಯವರ ಅನುಮತಿ ಪಡೆಯಬೇಕಿತ್ತು. ಅವರು ಈ ಉತ್ಪನ್ನ ಸರಿ ಇದೆಯೋ ಇಲ್ಲವೋ ಎಂದು ಹೇಳುತ್ತಾರೆಯೇ ವಿನಹಃ ತಂತ್ರಜ್ಞಾನದ ಬಗ್ಗೆ ಯಾವ ಮಾಹಿತಿಯನ್ನು ಹಂಚಿಕೊಳ್ಳುದಿಲ್ಲ. ಮೂಲ ಉತ್ಪನ್ನದ ಸೂತ್ರದ (ಫಾರ್ಮುಲಾ) ಅದರ ಸಾಧಕ ಬಾಧಕಗಳ ಅಧ್ಯಯನ, ಪ್ರಾಣಿಗಳ ಮೇಲೆ ಪ್ರಯೋಗ ಇತ್ಯಾದಿ ನಡೆಸಿ ಉತ್ಪನ್ನ ತಯಾರಿಸಿದೆವು. ಅಧ್ಯಯನಕ್ಕೆ ಅಗತ್ಯ ಉಪಕರಣಗಳು ನಮ್ಮ ದೇಶದಲ್ಲಿ ಇರದ ಕಾರಣ ಇಟಲಿಗೆ ಹೋಗಿ ಪರೀಕ್ಷಿಸಿದೆವು.
ಅನಂತರ ಹೈದರಾಬಾದ್ ಹಾಗೂ ಮುಂಬಯಿಯ ಪ್ರಯೋಗಾಲಯದಲ್ಲಿ ಸಂಶೋಧನೆ ಮುಂದುವರಿಸಿದೆವು. 8 ವರ್ಷಗಳ ಅಧ್ಯಯನದ ಬಳಿಕ 2012ಕ್ಕೆ ಪೂರ್ಣ ಪ್ರಮಾಣದ ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ತಯಾರಿಸಲಾಯಿತು ಎಂದು ಅವರು ಉತ್ಪನ್ನ ಸಂಶೋಧನೆ ಬಗ್ಗೆ ಮಾಹಿತಿನೀಡಿದರು. ‘ಆ್ಯಂಪೊಟೆರಿಸಿನ್ ಬಿ’ ಯು ಚುಚ್ಚು ಮದ್ದುಗಳ ಮೂಲವಾಗಿದ್ದು ಸಾರ್ವಜನಿಕವಾಗಿ ಲಭ್ಯವಿರುತ್ತದೆ. ಇದನ್ನು ಬಳಸಿಕೊಂಡು ನಾಲ್ಕು ಬಗೆಯ ಚುಚ್ಚು ಮದ್ದುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲನೆಯದು ಸಾಂಪ್ರದಾಯಿಕ ಉತ್ಪನ್ನ, ಆ ಬಳಿಕ ಲೈಪೋಸೋಮಲ್ ‘ಆ್ಯಂಪೊ ಟೆರಿಸಿನ್ ಬಿ ಇಂಜೆಕ್ಷನ್’ ಕಂಡು ಹಿಡಿಯಲಾಯಿತು. ಇದು ಮೊದಲು ನೀಡುತ್ತಿದ್ದ ಔಷಧಕ್ಕಿಂತ 75 ಪಟ್ಟು ಹೆಚ್ಚು ಸುರಕ್ಷತಾ ಪ್ರೊಫೈಲ್ ಹೊಂದಿದೆ. ಮೂರನೆಯದಾಗಿ ‘ಆ್ಯಂಪೊಟೆರಿಸಿನ್ಬಿ ಲಿಪಿಡ್ ಕಾಂಪ್ಲೆಕ್ಸ್’ (ಅಬೆಲ್ಲೆಟ್) ಇದು ಎರಡನೆಯ ಇಂಜೆಕ್ಷನ್ಗಿಂತ 20 ಪಟ್ಟು ಹೆಚ್ಚಿನ ಪರಿಣಾಮಕಾರಿ. ಬಳಿಕ ‘ಆ್ಯಂಪೊಟೆರಿಸಿನ್ ಬಿ ಎಮಲ್ಸನ್’ ಅನ್ನು ಅಗ್ಗದ ದರದಲ್ಲಿ ಸಿಗುವಂತೆ ಅಭಿವೃದ್ಧಿಪಡಿಸಲಾಯಿತು. ಇದು ಮಾಮೂಲಿ ಇಂಜೆಕ್ಷನ್ಗಿಂತ 150 ಪಟ್ಟು ಪರಿಣಾಮಕಾರಿ. ಆರ್ಥಿಕವಾಗಿಯೂ ಹೊರೆ ಅಲ್ಲ ಎಂದು ಅವರು ಹೇಳಿದರು.
ವಿವಿಧ ಬಣ್ಣಗಳಲ್ಲಿ ಕಂಡುಬರುವ ಫಂಗಸ್ (ಶಿಲೀಂಧ್ರ) ಬಗ್ಗೆ ಭಯ ಅನಗತ್ಯ. ಸಕಾಲಿಕ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಸಮಸ್ಯೆ ಇದು. ಕಪ್ಪು, ಬಿಳಿ, ಹಳದಿ ಯಾವುದೇ ಹೆಸರಿದ್ದರೂ ಫಂಗಸ್ಗಷ್ಟೇ ಚಿಕಿತ್ಸೆ, ಹಾಗಾಗಿ ಆ ಕುರಿತು ಭಯ ಬೇಡ.
ದೇಹದಲ್ಲಿ ಕುಳಿತ ಫಂಗಸ್ ತೊಲಗಿಸಲು ಎಷ್ಟು ಪ್ರಮಾಣದ ಔಷಧ ಅಗತ್ಯ ಎಂಬುದನ್ನು ವೈದ್ಯರು ನಿರ್ಧರಿಸಬೇಕು. ಫಂಗಸ್ ಬರಲು ಯಂತ್ರಗಳಲ್ಲಿನ ತೇವಾಂಶ, ಲೋಹ ಯಾವುದೂ ಕಾರಣವಾಗಿರಬಹುದು. ದೇಹದಲ್ಲಿ ಫಂಗಸ್ ಹೆಚ್ಚಾಗಲು ಕಾರಣ ಏನು ಎನ್ನುವುದನ್ನು ಅಧ್ಯಯನದ ಮೂಲಕವೇ ಕಂಡುಹಿಡಿಯಬೇಕು. ಒಂದೇ ಪ್ರದೇಶದಲ್ಲಿ ಹೆಚ್ಚಿನವರಿಗೆ ಬರುತ್ತದೆಯೋ, ಬೇರೆ ಬೇರೆ ಕಡೆಗಳಲ್ಲಿ ಬರುತ್ತದೆಯೋ ಎಂಬುದನ್ನೂ ಗಮನಿಸಬೇಕು. ಆದರೆ ಇದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದರು.
ನನ್ನ ತಂದೆ ದಿವಂಗತ ಬಿ.ಅಣ್ಣಪ್ಪ ಪೈ ಮತ್ತು ತಾಯಿ ದಿವಂಗತ ಶಾಂತಾಬಾಯಿವರಿಗೆ ನಾನು ಸೇರಿ 9 ಜನ ಮಕ್ಕಳು. ಗಂಗೊಳ್ಳಿಯಂತಹ ಪುಟ್ಟ ಗ್ರಾಮೀಣ ಪ್ರದೇಶದಲ್ಲಿ ಅಂದು ಎಲ್ಲರಿಗೂ ಶಿಕ್ಷಣ ನೀಡುವುದು ಅಸಾಧ್ಯದ ಮಾತು. ಆದರೆ ನನ್ನ ಹೆತ್ತವರು ನಮಗೆಲ್ಲರಿಗೂ ಅವರಿಂದ ಸಾಧ್ಯವಾದಷ್ಟು ಶಿಕ್ಷಣ ನೀಡಿ ನಮ್ಮೆಲ್ಲರನ್ನು ಉತ್ತಮ ಹಂತಕ್ಕೆ ತಲುಪುವಂತೆ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದುದರಿಂದ ಮತ್ತು ಅವರು ನೀಡಿದ ಉತ್ತಮ ಸಂಸ್ಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ದೇವರ ಹಾಗೂ ಹಿರಿಯರ ಆಶೀರ್ವಾದದಿಂದ ನನ್ನ ಈ ಸಂಶೋಧನೆ ಬೆಳಕಿಗೆ ಬಂದಿದೆ ಎಂದು ಗದ್ಗದಿತರಾಗಿ ನುಡಿದರು.
ನಾನು ಅಭಿವೃದ್ಧಿಪಡಿಸಿದ ಉತ್ಪನ್ನ ಇಂದು ಈ ಮಾಹಾಮಾರಿಗೆ ರಾಮಬಾಣವಾಗಿ ಕೆಲಸ ಮಾಡಬಹುದು ಎಂದು ಯಾವತ್ತೂ ಎಣಿಸಿರಲಿಲ್ಲ. ಆದರೆ ಈ ಉತ್ಪನ್ನ ಒಂದು ಒಳ್ಳೆಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ಬಹಳ ಸಂತೋಷವಾಗುತ್ತಿದೆ. ಈ ಸಾಧನೆ ಮಾಡಲು ಸಹಕರಿಸಿದ ನಮ್ಮ ತಂಡದ ಏಳು ಜನ ಸಂಶೋಧಕರಿಗೆ ಅವಕಾಶ ನೀಡಿದ ಭಾರತ್ ಸೀರಮ್ ಅಂಡ್ ವ್ಯಾಕ್ಸಿನ್ಸ್ ಕಂಪೆನಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಸಂಸ್ಥೆಗಳಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿ, ಬೆಂಗಳೂರಿನಲ್ಲಿ 1975ರಲ್ಲಿ ಬಿ. ಫಾರ್ಮ್ ಮತ್ತು ಮಣಿಪಾಲದಲ್ಲಿ 1977ರಲ್ಲಿ ಎಂ. ಫಾರ್ಮ್ ಸ್ನಾತಕೋತ್ತರ ಶಿಕ್ಷಣ ಪಡೆದುಕೊಂಡು, ಉದ್ಯೋಗಕ್ಕಾಗಿ ಮುಂಬೈನಲ್ಲಿರುವ ಭಾರತ್ ಸೀರಮ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿ ಸೇರಿದ್ದರು. ಭಾರತ್ ಸೀರಮ್ ಕಂಪೆನಿಯಲ್ಲಿ 17 ವರ್ಷ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿರುವ ಶ್ರೀಕಾಂತ ಪೈಯವರು ಆ್ಯಂಪೊಟೆರಿಸಿನ್ ಉತ್ಪನ್ನ ಕಂಡು ಹಿಡಿದಾಗ ಕಂಪೆನಿಯ ಅಭಿವೃದ್ಧಿ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾಗಿದ್ದರು.
ಶೀಲೀಂದ್ರ ಸೋಂಕಿನಿಂದ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಿದರು. ಈಗ ಅದು ಬ್ಲ್ಯಾಕ್ ಫಂಗಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಭಾರತ್ ಸೀರಮ್ಸ್ ಎಂಡ್ ವ್ಯಾಕ್ಸಿನ್ ತಯಾರಕ ಘಟಕದ ಒಂದೇ ತಂಡವು ವಿಭಿನ್ನ ಪರಿಣಾಮಕಾರಿತ್ವ, ಸುರಕ್ಷೆ ಮತ್ತು ವಿಶೇಷ ಪ್ರೊಫೈಲ್ಗಳನ್ನು ಹೊಂದಿದ 4 ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ. ಶಸ್ತ್ರಚಿಕಿತ್ಸೆ ವೇಳೆ ರೋಗಿಯ ಪ್ರಜ್ಞೆ ತಪ್ಪಿಸಲು (ಅನಸ್ತೇಶಿಯಾ) ಬಳಸುವ ಪ್ರೊಟೊಕಾಲ್ ಚುಚ್ಚುಮದ್ದು ಸೇರಿದಂತೆ ವಿವಿಧ ಔಷಧ ಉತ್ಪನ್ನಗಳಿಗೆ ಸಂಬಂಧಿಸಿದ 16 ಹಕ್ಕುಸ್ವಾಮ್ಯಗಳು ಶ್ರೀಕಾಂತ ಪೈ ಹೆಸರಿನಲ್ಲಿದೆ. ಭಾರತ್ ಸೀರಮ್ ಎಂಡ್ ವ್ಯಾಕ್ಸಿನ್ ಕಂಪೆನಿಯಿಂದ ನಿವೃತ್ತರಾದ ಬಳಿಕ ಬಿ.ಶ್ರೀಕಾಂತ ಪೈ, ಸದ್ಯ ಮುಂಬೈನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದು, ಫ್ರೀ ಲ್ಯಾನ್ಸ್ ಕನ್ಸಲೆಂಟ್ ಆಗಿ ದುಡಿಯುತ್ತಿದ್ದಾರೆ.
ವಿಶೇಷ ವರದಿ : ಬಿ.ರಾಘವೇಂದ್ರ ಪೈ