ಕುಂದಾಪುರ (ಆ, 10) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ಕಳಸಿಗೆಗೆ ಭತ್ತ ಹೊಯ್ಯುವುದರ ಮೂಲಕ ಕುಂದಗನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕ ಮನು ಹಂದಾಡಿಯವರು ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾಷೆಯನ್ನು ಬಳಸುವಿಕೆ, ಬೆಳೆಸುವಿಕೆ ತನ್ಮೂಲಕ ಉಳಿಸುವಿಕೆ ಕುರಿತಂತೆ ಹಾಗೂ ಕುಂದಾಪ್ರ ಭಾಷಾ ಸೊಗಡು ರಂಜನೀಯವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಪ್ರತಿಭಾ ಟ್ಯುಟೋರಿಯಲ್ನ ಸುಬ್ರಹ್ಮಣ್ಯ ಭಟ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗ ಮತ್ತು ಕುಂದವಾಹಿನಿ ಅಂತರ್ಜಾಲ ಸುದ್ದಿತಾಣ ಆಯೋಜಿಸಿದ ಆನ್ಲೈನ್ ಭಾಷಣ ಸ್ಪರ್ಧೆಯ ವಿಜೇತರಾದ ನಿರೋಷಾ ಖಾರ್ವಿ, ಅಖಿಲೇಷ್ ಶೆಟ್ಟಿ, ಶ್ರೀದೇವಿ ಅವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರರು ಹಾಗೂ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗಸಂಸ್ಥೆಗಳಾದ ಆರ್ಎನ್ಎಸ್ ಪದವಿ ಪೂರ್ವ ಕಾಲೇಜು, ಹೆಚ್ಎಂಎಂ ಮತ್ತು ವಿಕೆಆರ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹಾಜರಿದ್ದರು.
ವಿದ್ಯಾರ್ಥಿ ದೀಕ್ಷಿತ್ ಭತ್ತ ಕುಟ್ಟುವ ಹಾಡನ್ನು ಹಾಡುವುದರ ಮೂಲಕ ಪ್ರಾರ್ಥನೆಗೈದರು. ಉಪನ್ಯಾಸಕ ಯೋಗಿಶ್ ಶ್ಯಾನುಭಾಗ್, ಉಪನ್ಯಾಸಕಿ ಆಶಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸುಪ್ರಿತಾ ಶೆಟ್ಟಿ ಕುಂದಾಪ್ರ ಕನ್ನಡದಲ್ಲೆ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು. ನಂತರ ಅಭಿನವ ಕಲಾತಂಡ ಕುಂದಾಪ್ರ ಇವರ ಕರ್ಕಾಟಿ ಅಮಾಸಿ ಎನ್ನುವ ಕಿರುಚಿತ್ರ ಮತ್ತು ಅನಿಸಿಕೆ ಹೌಸ್ ಇವರ ನಮ್ಮೂರ ಕುಂದಾಪ್ರ ಎನ್ನುವ ಆಲ್ಬಮ್ ಸಾಂಗ್ ಪ್ರದರ್ಶಿಸಲಾಯಿತು.