2 ಅಕ್ಟೋಬರ್ 1869 ರಂದು ನಮ್ಮ ಭಾರತಾಂಬೆಯ ಪುಣ್ಯಗರ್ಭದಲ್ಲಿ ಜನಿಸಿ, ಭಾರತಾಂಬೆಯ ಕೀರ್ತಿಪತಾಕೆಯನ್ನು ವಿಶ್ವಕ್ಕೆ ಹಾರಿಸಿದ ಮಹಾನ್ ಚೇತನ ಮಹಾತ್ಮಾ ಗಾಂಧೀಜಿ. ಗಾಂಧಿ ಎಂದರೆ ಯಾರೊಬ್ಬರೂ ಮರೆಯಲಾಗದ ಭಾವ. ಜಗತ್ತಿಗೆಲ್ಲಾ ಶಾಂತಿ ಪಾಠಮಾಡಿದ ಶಾಂತಿ ದೂತ. ಆಧುನಿಕ ತಂತ್ರಜ್ಞಾನ ಯುಗದಲ್ಲೂ ಸದಾ ಕಾಡುವ ಶಕ್ತಿ. ದೇಶಕಾಲಗಳನ್ನು ಮೀರಿದ ವ್ಯಕ್ತಿ, ಇವರು ವ್ಯಕ್ತಿಯಷ್ಟೇ ಅಲ್ಲ ಚಿಂತನೆಗಳ ಜಾಲವಾಗಿದ್ದಾರೆ. ಆದರೆ ನಮ್ಮ ದುರ್ದೈವವೆಂದರೆ ಅಂದಿನಿoದ ಇಂದಿನವರೆಗೂ ಅಂತಹ ಮತ್ತೊಬ್ಬ ಮಹಾನ್ ಚೇತನ ಭಾರತಾಂಬೆಯ ಮಡಿಲಿನಲ್ಲಿ ಜನಿಸದೆ ಇರುವುದು.
ರಾಷ್ಟçಪಿತ, ಮಹಾತ್ಮ ,ಬಾಪೂ ಎಂಬ ಶ್ರೇಷ್ಠ ಬಿರುದುಗಳನ್ನು ಪಡೆದ ಗಾಂಧೀಜಿಯವರು ಗುಜುರಾತ್ನ ಪೋರ್ಬಂದರ್ನಲ್ಲಿ ಕರಮಚಂದಗಾoಧಿ ಮತ್ತು ಪುತಲಿಬಾಯಿ ದಂಪತಿಗಳ ಮಗನಾಗಿ 1869 ಅಕ್ಟೋಬರ್ 2ರಂದು ಜನಿಸಿದರು. ಹಾಗಾಗಿ ಈ ದಿನವನ್ನು ನಾವು ‘ಗಾಂಧಿ ಜಯಂತಿ’ಯನ್ನಾಗಿ ಆಚರಿಸಿದರೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007ರಲ್ಲಿ ಈ ಅಕ್ಟೋಬರ್ 2ಅನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ಎಂದು ಘೋಷಿಸಿದೆ. ವಿಶ್ವದಾದ್ಯಂತ ಅಹಿಂಸೆಯ ಬಗ್ಗೆ ಜಾಗೃತಿ ಮೂಡಿಸುವುದೇ ಈ ಅಂತರಾಷ್ಟ್ರೀಯ ಅಹಿಂಸಾ ದಿನದ ಮುಖ್ಯ ಉದ್ದೇಶವಾಗಿದೆ.ಈ ಆಚರಣೆಯನ್ನು ನಾವುಗಳೂ ಮಾತ್ರ ಆಚರಿಸುತ್ತಿಲ್ಲ, ಪ್ರಪಂಚದ ಬಹುಪಾಲು ರಾಷ್ಟ್ರಗಳು ಆಚರಿಸುತ್ತಿವೆ. ಇದಕ್ಕೆ ಕಾರಣ ಗಾಂಧಿ ಎಂಬ ಮಾಂತ್ರಿಕನ ತತ್ವ ಮತ್ತು ಮೌಲ್ಯಗಳ ಮೋಡಿ.
ಗಾಂಧಿಯ ಚಿಂತನೆಗಳು ಎಷ್ಟು ಶ್ರೇಷ್ಟ, ಪ್ರಸ್ತುತವೆಂದರೆ ಈಗಿನ ಹೈಟೆಕ್ ನಾಗರೀಕತೆಯ ಭೋಗಪೀಡಿತ ಜನಾಂಗಕ್ಕೆ ತುಂಬಾ ಅನಿವಾರ್ಯ . ಆದರೆ ಗಾಂಧಿಜಿಯ ಹೆಸರನ್ನು ಬಂಡವಾಳವನ್ನಾಗಿ ಮಾಡಿಕೊಂಡು ಎಲ್ಲೆಂದರಲ್ಲಿ ಅವರ ಮೂರ್ತಿಯನ್ನು ಕೆತ್ತಿ ನಿಲ್ಲಿಸಿ ರಸ್ತೆಗಳಿಗೆ,ಶಾಲೆಗಳಿಗೆ,ಪಾರ್ಕ್ ಗಳಿಗೆ,ಸಾರ್ವಜನಿಕ ಸ್ಥಳಗಳಿಗೆ ಮತ್ತು ವಿವಿಧ ಸಂಸ್ಥೆಗಳಿಗೆ ಅವರ ಹೆಸರಿಟ್ಟು ಅವರ ತತ್ವ ,ಮೌಲ್ಯಗಳನ್ನು ಪಾಲಿಸದೆ ಮತ್ತು ಗಾಂಧೀಜಿಯ ಕನಸುಗಳನ್ನು ಕಮರಿಸಿ ಸಮಾಧಿಮಾಡುತ್ತಿರುವ ಈ ನಾವುಗಳು ಯಾವ ಪುರುಷಾರ್ಥಕ್ಕಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ.
21ನೇ ಶತಮಾನದ ಹೈಟೆಕ್ ನಾಗರೀಕತೆಯ ಭೋಗಪೀಡಿತ ಜನಾಂಗಕ್ಕೆ ಗಾಂಧಿ ಮತ್ತು ಗಾಂಧಿ ಚಿಂತನೆಗಳು ಏನೂ ಅಲ್ಲ! ನಾಥೂರಾಮ್ ಗೋಡ್ಸೆ ಕೇವಲ ಗಾಂಧಿ ಎಂಬ ಮಹಾತ್ಮನನ್ನು ಕೊಂದರೆ ನಾವುಗಳು ಅವರ ತತ್ವ ಮತ್ತು ಮೌಲ್ಯಗಳನ್ನು ಕೊಂದ ಪಾತಕಿಗಳು.
ಈ ಗಾಂಧಿ ಚಿಂತನೆಯಲ್ಲಿ ಬುದ್ಧನ ಅನುಕಂಪ,ಸoಯಮ, ಮಹಾವೀರನ ಅಹಿಂಸೆ, ಸಹನೆ ಮತ್ತು ಏಸುಕ್ರಿಸ್ತನ ಜೀವನ ಪ್ರೀತಿ, ಕ್ಷಮೆ ಇವೆಲ್ಲವೂ ಅಡಕವಾಗಿವೆ. ಆದರೆ ಭಾರತೀಯರಿಗೆ ಗಾಂಧಿ ಮತ್ತು ಅವರ ತತ್ವದ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲ. ಇವರು ಪ್ರತಿಪಾದಿಸಿದ ಹಲವು ಮಹತ್ವದ ರಾಜಕೀಯ ಮತ್ತು ಆರ್ಥಿಕ ಚಿಂತನೆಗಳು ಇಂದಿಗೂ ನಮ್ಮ ಸಂವಿಧಾನದ ರಾಜ್ಯನಿರ್ಧೇಶಕ ತತ್ವಗಳ ಭಾಗವಾಗಿ ಚರ್ಚೆಗೊಳಗಾಗುತ್ತಿವೆಯೇ ಹೊರತು ಕಾನೂನಾಗಲು ಸಾಧ್ಯವಾಗಿಲ್ಲ. ಕಾರಣ ನಮ್ಮನ್ನಾಳುವ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡು ಪ್ರಯೋಗಿಸಿಲ್ಲ.
ಗಾಂಧೀಜಿ ತನ್ನ ಉತ್ತರಾಧಿಕಾರಿಯಾಗಿ ಪಂಡಿತ್ ಜವಾಹರ್ಲಾಲ್ ನೆಹರುರವರನ್ನು ಪರಿಚಯಿಸಿದರು. ಆದರೆ ಅವರಿಗೆ ಗಾಂಧಿಯ ಆರ್ಥಿಕ ತತ್ವಗಳಲ್ಲಿ ನಂಬಿಕೆ ಇರಲಿಲ್ಲ. ಇಂದು ಗ್ರಾಮ ಮತ್ತು ನಗರಗಳ ನಡುವೆ ಇರುವ ಕಂದರಕ್ಕೆ ನಾವೇ ಕಾರಣರಾಗಿದ್ದೇವೆ. ಪ್ರಸ್ತುತ ಭಾರತದ ಜ್ವಲಂತ ಸಮಸ್ಯೆಗಳಾದ ಭಯೋತ್ಪದಕತೆ, ಭ್ರಷ್ಟಾಚಾರ, ಕೋಮುವಾದ,ಅಸಮಾನತೆ, ಅನಕ್ಷರತೆ ಇನ್ನೂ ಮೊದಲಾದವುಗಳಿಗೆ ಗಾಂಧಿ ತತ್ವದ ಕಡೆಗಣನೆಯೇ ಕಾರಣವಾಗಿದೆ. ಇವರ ಚಿಂತನೆಗಳಾದ ಸತ್ಯ ಮತ್ತು ಅಹಿಂಸೆ, ಧಾರ್ಮಿಕ ಸಹಿಷ್ಣುತೆ, ವಿಶ್ವಶಾಂತಿ, ವಿಶ್ವಭ್ರಾತೃತ್ವ,ಸರಳ ಜೀವನ ಮತ್ತು ಉನ್ನತ ಚಿಂತನೆ,ಆರ್ಥಿಕ ವಿಕೇಂದ್ರೀಕರಣ,ಗ್ರಾಮೀಣಾಭಿವೃದ್ದಿ,ಮಹಿಳಾ ಸಬಲೀಕರಣ,ಸರ್ವೋದಯ,ಮೌಲ್ಯಾಧಾರಿತ ಶಿಕ್ಷಣ ಇನ್ನೂ ಮೊದಲಾದವುಗಳು ಈ ಮಾನವ ಕುಲ ಜೀವಂತವಾಗಿರುವವರೆಗೂ ಅವಶ್ಯಕವಾಗಿವೆ.
ಗಾಂಧಿಯoತಹ ಮಹಾತ್ಮ ಎಲ್ಲಾ ಕಾಲಕ್ಕೂ ಸಲ್ಲುವಂತಹ ನಾಯಕ.ಜಾಗತೀಕರಣದ ಪರಿಣಾಮವಾಗಿ ಇಂದು ಇಡೀ ಜಗತ್ತು ಒಂದು ರಾಷ್ಟ್ರ ,ಒಂದು ಸಂಸ್ಕೃತಿ ಮತ್ತು ಒಂದು ಜನಾಂಗವಾಗಿ ಪರಿವರ್ತಿತವಾಗುವಂತಹ ಆಧುನಿಕ ನಾಗರೀಕತೆಯ ಕಾಲದಲ್ಲೂ ಗಾಂಧಿಜಿ ಪ್ರಸ್ತುತವಾಗುತ್ತಿದ್ದಾರೆ. ಇವರ ಜೀವನ ಮತ್ತವರ ಜೀವನ ಸಂದೇಶಗಳು ಎಂದೆoದಿಗೂ ಪ್ರಸ್ತುತ ಎನ್ನುವುದು ನಿರ್ವಿವಾದ.
20 ಮತ್ತು 21ನೇ ಶತಮಾನದ ಮಹಾನ್ ಜಾಗತಿಕ ನಾಯಕರ ಮೇಲೆ ಈ ಮಹಾತ್ಮ ಉಂಟು ಮಾಡಿರುವ ಪ್ರಭಾವ ಅಗಾದವಾದುದಾಗಿದೆ. ಹಾಗಾಗಿ ಆ ಮಹಾನ್ ನಾಯಕರು ಗಾಂಧಿ ಮತ್ತು ಅವರ ತತ್ವಗಳನ್ನು ಅನೇಕ ರೀತಿಯಲ್ಲಿ ಕೊಂಡಾಡಿದ್ದಾರೆ.
ಜಾರ್ಜ್ ಬರ್ನಾಡ್ಷಾ-“ಗಾಂಧಿ ವ್ಯಕ್ತಿಯಲ್ಲ,ಅಸಮಾನ್ಯ ಶಕ್ತಿ. ಹಾಗೆ ಮುಂದುವರಿದು ಗಾಂಧಿಯವರು ಭೋದಿಸಿದ ಸತ್ಯ ಮತ್ತು ಅಹಿಂಸೆಯ ತತ್ವಗಳು ಇಂದಿಗೂ ಸೂಕ್ತವಾಗಿವೆ. 20ನೇ ಶತಮಾನದ ಅಂತ್ಯದಲ್ಲಿ ಈ ಜಗತ್ತು ಎರಡು ಪ್ರಮುಖ ಪೊಲಿಟಿಕಲ್ ಅಜೆಂಡಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ. ಒಂದು ಗಾಂಧಿ ಮತ್ತೊಂದು ಅಣುಬಾಂಬ್. ಈ ಎರಡಲ್ಲಿ ಯಾವುದನ್ನು ಮನುಷ್ಯ ಆಯ್ಕೆ ಮಾಡುತ್ತಾನೆ ಎಂಬುದರ ಮೇಲೆ ಮುಂದಿನ ಶತಮಾನದಲ್ಲಿ ಮಾನವ ಭವಿಷ್ಯ ನಿಂತಿದೆ”ಎoದಿದ್ದಾರೆ.
ಡಾ.ಮಾರ್ಟಿನ್ ಲೂಥರ್ ಕಿಂಗ್-“ಕಾನೂನು ಸಾಧಿಸದಿದ್ದನ್ನು ಅಹಿಂಸೆ ಸಾಧಿಸುತ್ತದೆ.ಗಾಂಧೀಜಿ ಇಡೀ ಜಗತ್ತಿಗೆ ಅನಿವಾರ್ಯ. ಅವರನ್ನು ಮರೆತರೆ ವಿಶ್ವವೇ ನಾಶ” ಎಂದಿದ್ದಾರೆ.
ಅಲ್ಬರ್ಟ್ಐನ್ಸ್ಟೀನ್-“ನಾನು ಗಾಂಧಿಯನ್ನು ಈ ಯುಗದ ಮಹೋನ್ನತ ರಾಜಕೀಯ ವ್ಯಕ್ತಿ ಎಂದು ಪರಿಗಣಿಸುತ್ತೇನೆ. ಗಾಂಧಿಯoತಹ ಮಾನವ ಈ ಜಗತ್ತಿನಲ್ಲಿ ರಕ್ತಮಾಂಸಗಳಿoದ ತುಂಬಿಕೊoಡು ಈ ಭೂಮಿಯ ಮೇಲಿದ್ದರೆಂಬ ಸತ್ಯವನ್ನು ಮುಂದಿನ ಪೀಳಿಗೆಯವರು ನಂಬಲಾರರು” ಎಂದಿದ್ದಾರೆ.
ಮಾವೋತ್ಸೆತುಂಗ್_”ತನ್ನೆಲ್ಲಾ ಗ್ರಾಮೀಣ ಯೋಜನೆಗಳಿಗೆ ಗಾಂಧಿ ಸ್ಪೂರ್ತಿ.ಗಾಂಧಿ ಭಾರತದಲ್ಲಿ ಜನಿಸಿರಬಹುದು ಅವರ ಆರ್ಥಿಕ ತತ್ವಗಳನ್ನು ಅನುಷ್ಟಾನ ಮಾಡಿದವನು ನಾನು” ಎಂದಿದ್ದಾರೆ.
ಬರಾಕ್ ಒಬಾಮ-“ಗಾಂಧಿ ಕೇವಲ ಭಾರತಕ್ಕೆ ಮಾತ್ರ ನಾಯಕರಲ್ಲ,ಇಡೀ ಜಗತ್ತಿಗೆ ನಾಯಕರು” ಎಂದಿದ್ದಾರೆ. ಡಾ.ನೆಲ್ಸನ್ ಮಂಡೆಲಾ-“ಗಾoಧಿ ನನಗೆ ಸ್ಪೂರ್ತಿ”ಎಂದು ಹೇಳಿದ್ದಾರೆ.ಅವರು ಪ್ರತೀ ದಿನ ಕಡಿಮೆ ಅಂದರೆ 2 ಪುಟಗಳನ್ನು ಗಾಂಧಿಯ ಬಗ್ಗೆ ಓದದೆ ತಮ್ಮ 93ನೇ ವಯಸ್ಸಿನಲ್ಲೂ ಮಲಗುತ್ತಿರಲಿಲ್ಲವಂತೆ.
1968ರಲ್ಲಿ ನಡೆದ ಗಾಂಧೀಜಿಯವರ ಜನ್ಮಶತಾಬ್ದಿಯ ಸಮಯದಲ್ಲಿ ಅಮೇರಿಕಾದ ‘ಟೈಮ್ಸ್’ ಪತ್ರಿಕೆಯು ತನ್ನ ವಿಶೇಷ ಲೇಖನದಲ್ಲಿ ‘ಗಾಂಧಿ 21ನೇ ಶತಮಾನದಲ್ಲಿ ಇನ್ನೂ ಶಕ್ತಿಶಾಲಿಯಾಗುತ್ತಾರೆ.ಅಷ್ಟೇ ಅಲ್ಲ ಇಡೀ ಜಗತ್ತೇ ಗಾಂಧಿ ತತ್ವವನ್ನು ಅನುಸರಿಸುವುದು ಮನುಕುಲದ ಉಳಿವಿಗೆ ಅನಿವಾರ್ಯವಾಗುವುದು’ಎಂದು ಉಲ್ಲೇಖಿಸಿತ್ತು.ಆದರೆ ಇಂದು ಭಾರತೀಯರಿಗೆ ಗಾಂಧಿ ಬೇಡವಾಗಿದ್ದಾರೆ. ಹಾಗಾಗಿಯೇ ಆಶಿಷ್ ಲಾಭ್ ಅವರಂತಹ ಕೆಲವರು ಗಾಂಧೀಜಿಯವರನ್ನು ವಿಮರ್ಶೆಮಾಡಿ “ಈ ಮಹಾನ್ ನಾಯಕನ ದೊಡ್ಡ ದುರಂತವೆoದರೆ ಭಾರತದಲ್ಲಿ ಇಂದೂ ಕೂಡ ಅವರು ಅತ್ಯಂತ ಹೆಚ್ಚು ತಪ್ಪಾಗಿ ತಿಳಿಯಲ್ಪಟ್ಟ ಮತ್ತು ಅರ್ಥೈಸಲ್ಪಟ್ಟ ವ್ಯಕ್ತಿಯಾಗಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದುರದೃಷ್ಟವೆಂದರೆ ಸರಳ ಜೀವನ ಮತ್ತು ಉದಾತ್ತ ಚಿಂತನೆಯ ಮೂಲಕ ನುಡಿದಂತೆ ನಡೆದು,ತಾನು ನಂಬಿದ್ದ ತತ್ವ ಮತ್ತು ಮೌಲ್ಯಗಳಿಗಾಗಿ ತನ್ನ ಜೀವನವನ್ನೇ ಮುಡಪಾಗಿಟ್ಟ ಇಂತಹ ಮಹಾನ್ ಸಂತನ ಹತ್ಯೆಗೆ 5 ಬಾರಿ ವಿಫಲ ಪ್ರಯತ್ನ ನಡೆದು 6ನೇ ಬಾರಿಯ ಪ್ರಯತ್ನ ಸಫಲವಾಯಿತು. ಮುಸ್ಲಿಂರ ಬಗ್ಗೆ ಅನಾವಶ್ಯಕವಾಗಿ ಸೌಮ್ಯತೆ ತೋರಿಸಿದರೆಂಬ ಕಾರಣದಿಂದ ನಾಥೂರಾಮ್ ಗೋಡ್ಸೆ ಎಂಬ ಯುವಕ 30ಜನವರಿ 1948ರಂದು ಅವರ ಕಾಲಿಗೆ ನಮಸ್ಕರಿಸಿ ಅವರನ್ನು ತನ್ನ ಎರಡನೇ ಹತ್ಯೆಯ ಪ್ರಯತ್ನದಲ್ಲಿ ಗುಂಡಿಕ್ಕಿ ಕೊಂದ. ಹೀಗೆ ಗಾಂಧಿಯುಗ(1920-1948)ಕೊನೆಗೊoಡು ಅಹಿಂಸೆಯ ಆರಾಧಕ ಹಿಂಸೆಯ ಮೂಲಕ ಹತ್ಯೆಗೊಳಗಾದುದು ಎಂತಹ ವಿಪರ್ಯಾಸ.ಹಾಗೆಯೇ ಇಂತಹ ಮಹಾತ್ಮನಿಗೆ ನೋಬಲ್ ಪ್ರಶಸ್ತಿ ಬಾರದಿರುವುದೂ ವಿಷಾದನೀಯ.
ಜಿ.ಆರ್.ಕೇಶವಮೂರ್ತಿ
ಉಪನ್ಯಾಸಕರು
ಬೆಂಗಳೂರು